ಹಸುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ; ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಕೇಂದ್ರಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ!
ಹಸುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹಸುಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವಂತೆ ಮತ್ತು ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಲಹಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಏಕೈಕ ಪೀಠವು, ಉತ್ತರ ಪ್ರದೇಶದಲ್ಲಿ ಗೋಹತ್ಯೆ ಕಾಯ್ದೆಯಡಿ ಬಂಧಿತನಾದ ಜಾವೇದ್ ಎಂಬ ವ್ಯಕ್ತಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಹಸುಗಳ ಬಗ್ಗೆ ಅವಲೋಕನಗಳನ್ನು ಹೇಳಿದೆ. ಅಲ್ಲದೆ, ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಗೋವುಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಬೇಕು ಎಂದು ನ್ಯಾಯಮೂರ್ತಿ ಯಾದವ್ ಹೇಳಿದ್ದಾರೆ. ಪ್ರಾಣಿಗಳಿಗೆ ಹಾನಿ ಮಾಡುವವರನ್ನು ಶಿಕ್ಷಿಸಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಧಾರ್ಮಿಕ ಮೂಲಭೂತವಾದ, ಕೋಮುವಾದ ರಾರಾಜಿಸುತ್ತಿರುವಾಗ, ಗೋವಿನ ಹೆಸರಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ, ನ್ಯಾಯಾಂಗ ತಾಳುವ ಇಂತಹ ನಿರ್ಧಾರಗಳು ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, “ಕೇಂದ್ರ ಸರ್ಕಾರವು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕಾನೂನನ್ನು ರೂಪಿಸಬೇಕು, ಸಂಸತ್ತಿನಲ್ಲಿ ಮಂಡಿಸಿ ಮತ್ತು ಅಂಗೀಕರಿಸಬೇಕು. ಸರ್ಕಾರ ಈ ಬಗ್ಗೆ ಕಾನೂನು ರೂಪಿಸಿದರೆ ಜನರು ಅವರನ್ನು ಹೆಚ್ಚು ಗೌರವಿಸುತ್ತಾರೆ” ಎಂದು RSS ವಿದ್ಯಾರ್ಥಿ ಸಂಘಟನೆ ABVPಯ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಚಂಡೀಘಡದಲ್ಲಿ ರೈಲ್ವೇ ಆರ್ಕೇಡ್ ನಿರ್ಮಾಣಕ್ಕೆ ಬಿಡ್ ಆಹ್ವಾನ; ಗೋಮಾಂಸ, ಹಂದಿ ಮಾಂಸ ನಿಷೇಧ!

