Facebook-BJP ಒಲವು: ಬಿಜೆಪಿ ಸಂಸದ ಭಾಗಿಯಾಗಿದ್ದಕ್ಕೆ ನಕಲಿ ಖಾತೆ ಬ್ಯಾನ್‌ ಮಾಡದ ಫೇಸ್‌ಬುಕ್‌!

ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣ ವೇದಿಕೆ ಫೇಸ್‌ಬುಕ್‌ ಇತ್ತೀಚೆಗೆ ಇಬ್ಬಂದಿತನದ ಧೋರಣೆಗಳಿಂದ ಸುದ್ದಿಯಾಗುತ್ತಲೇ ಇದೆ. ಬಲಪಂಥೀಯ ಧೋರಣೆಯನ್ನು ಫೇಸ್‌ಬುಕ್‌ ಹೊಂದಿದ್ದು, ಅಂತಹವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿಯಲ್ಲಿ ಭಾರತದಲ್ಲಿ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದು, ಬಿಜೆಪಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅರೋಪಗಳು ಕೇಳಿಬರುತ್ತಿವೆ.

ಭಾರತದ ಆಡಳಿತಾರೂಢ ಬಿಜೆಪಿ ಸರಕಾರದ ಸಚಿವರು ಮತ್ತು ನಾಯಕರ ಜನಪ್ರಿಯತೆಯನ್ನು ಹೆಚ್ಚಿಸುವ ದಾಳವಾಗಿ ಫೇಸ್‌ಬುಕ್‌ ಕಾರ್ಯ ನಿರ್ವಹಿಸುತ್ತಿದೆ. ನಕಲಿ ಖಾತೆಗಳನ್ನು ಬ್ಯಾನ್‌ ಮಾಡಲು ಮುಂದಾಗಿದ್ದ ಫೇಸ್‌ಬುಕ್‌, ಕೆಲವು ನಕಲಿ ಖಾತೆಗಳು ಬಿಜೆಪಿ ಸಂಸದರೊಬ್ಬರ ಪ್ರಚಾರಕ್ಕೆ ಬಳಕೆಯಾಗುತ್ತಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ಆ ಖಾತೆಗಳನ್ನು ಬ್ಯಾನ್‌ ಮಾಡುವುದರಿಂದ ಹಿಂದೆ ಸರಿದಿದೆ ಎಂದು ಫೇಸ್‌ಬುಕ್‌ನ ಮಾಜಿ ಡಾಟಾ ಸೈಂಟಿಸ್ಟ್ ಸೋಫಿಯಾ ಝಾಂಗ್ ಹೇಳಿರುವುದಾಗಿ ಪ್ರತಿಷ್ಠಿತ ಸುದ್ದಿ ಮಾಧ್ಯಮ ‘ದಿ ಗಾರ್ಡಿಯನ್ ‘ ವರದಿಯಲ್ಲಿ ತಿಳಿಸಿದೆ.

Read Also:  ಬಿಜೆಪಿ ಗೆಲುವಿಗಾಗಿ ಫೇಸ್‌ಬುಕ್ ಚುನಾವಣಾ‌ ಪ್ರಚಾರ: ತನಿಖೆಗೆ ಕಾಂಗ್ರೆಸ್‌ ಆಗ್ರಹ

ಶ್ರೀಮಂತರು ಮತ್ತು ಪ್ರತಿಷ್ಠಿತರಿಗಾಗಿ ಒಂದು ರೀತಿಯ ನೀತಿಗಳು ಮತ್ತು ಇತರರಿಗಾಗಿ ಇನ್ನೊಂದು ನೀತಿಯನ್ನು ಫೇಸ್‌ಬುಕ್‌ ಹೊಂದಿದೆ. ಇದು ನ್ಯಾಯಯುತವಾದುದ್ದಲ್ಲ ಎಂದು ಝಾಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಮಾತ್ರವಲ್ಲ,ವಿಶ್ವಾದ್ಯಂತದ ರಾಜಕೀಯ ನಾಯಕರು ಮತ್ತು ಗಣ್ಯರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಇಂತಹ ನಕಲಿ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು 2020ರ ಸೆಪ್ಟೆಂಬರ್‌ನಲ್ಲಿಯೇ ಝಾಂಗ್‌ ಅವರು ಫೇಸ್‌ಬುಕ್‌ಗೆ 6,600 ಪದಗಳುಳ್ಳ ಪತ್ರದಲ್ಲಿ ವಿವಸಿದ್ದರು. ಅದು ಈಗ ಸಾಬೀತಾಗಿದೆ. ಅದರೆ, ಅವುಗಳ ವಿರುದ್ದ ಫೇಸ್‌ಬುಕ್‌ ಯಾವುದೇ ಕ್ರಮವನ್ನು ಕೈಗೊಳ್ಳಲು ಮುಂದಾಗಿಲ್ಲ ಎಂದು ಅವರು ಹೇಳಿದ್ದಾರೆ.

2019ರ ಹಿಂದೆಯೇ ಕೆಲವು ನಕಲಿ ಖಾತೆಗಳು ನಾಲ್ಕು ಭಿನ್ನ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಮ್ಮ ಕಣ್ಣಿಗೆ ಬಿದ್ದಿತು. ಅವು ಆಡಳಿತಾರೂಢ ಬಿಜೆಪಿಯ ಕೆಲವು ನಾಯಕರ ಖಾತೆಗಳೊಂದಿಗೆ ನಿಖಟ ಸಂಬಂಧ ಹಿಂದಿದ್ದು, ಲೈಕ್ಸ್‌, ಕಮೆಂಟ್ ಮತ್ತು ಶೇರ್ ಗಳು ಸೇರಿದಂತೆ ನಕಲಿ ಸಂವಹನದಲ್ಲಿ ಇವು ತೊಡಗಿಕೊಂಡಿದ್ದವು. ಕೇವಲ ಬಿಜೆಪಿ ಪರ ಖಾತೆಗಳು ಮಾತ್ರವಲ್ಲದೆ, ಕಾಂಗ್ರೆಸ್ ಪರವಾದ ಕೆಲವು ನಕಲಿ ಸಂವಹನ ನಡೆಸುವ ಖಾತೆಗಳೂ ಕಂಡುಬಂದಿವೆ. ಆದರೆ, ಇವಾವುಗಳ ವಿರುದ್ದವೂ ಫೇಸ್‌ಬುಕ್‌ ಕ್ರಮ ಕೈಗೊಂಡಿಲ್ಲ ಎಂದು ಝಾಂಗ್‌ ತಿಳಿಸಿದ್ದಾರೆ.

ಭಾರತದಲ್ಲಿ ಫೇಸ್ಬುಕ್ ವಿರುದ್ಧ ಇಂತಹ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷದ ಆಗಸ್ಟ್ನಲ್ಲಿ ಬಿಜೆಪಿಯ ಸಂಸದರು ಮತ್ತು ನಾಯಕರಿಂದ ದ್ವೇಷಭಾಷಣಗಳಿಗೆ ಸಂಬಂಧಿಸಿದಂತೆ ಉಲ್ಲಂಘನೆಗಳ ವಿರುದ್ಧ ಯಾವುದೇ ಕ್ರಮವನ್ನು ಫೇಸ್ಬುಕ್ ಕೈಗೊಳ್ಳುತ್ತಿಲ್ಲ ಎಂದು ವಾಲ್‌ಸ್ಟ್ರೀಟ್‌ ಜರ್ನಲ್ ತನ್ನ ವರದಿಯಲ್ಲಿ ವಿವರಿಸಿತ್ತು.

Read Also: ಬಿಜೆಪಿ ಒಲವು ಹೊಂದಿದ್ದ ಫೇಸ್‌ಬುಕ್‌ ಕಾರ್ಯನಿರ್ವಾಹಕಿ ಅಂಕಿದಾಸ್‌ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights