ಚಿಂತಾಮಣಿ ಬಳಿ ಭೀಕರ ಅಪಘಾತ; ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ 08 ಜನರ ದುರ್ಮರಣ

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಮರಿನಾಯಕನಹಳ್ಳಿ ಗೇಟ್ ಬಳಿ ಸಿಮೆಂಟ್‌ ತುಂಬಿದ ಲಾರಿ ಮತ್ತು ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 08 ಜನರು ಸಾವಪ್ಪಿದ್ದಾರೆ.

ಭಾನುವಾರ ಮಧ್ಯಾಹ್ನ ಅಪಘಾತ ನಡೆದಿದ್ದು, ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ 17 ಜನರಲ್ಲಿ 06 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 09 ಮಂದಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು ಮತ್ತು ಕೋಲಾರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ದುರ್ಘಟನೆಯಲ್ಲಿ ಮೃತಪಟ್ಟವರನ್ನು ಜೀಪ್ ಚಾಲಕ ಮತ್ತು ಮಾಲೀಕ ರಮೇಶ್ (45), ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ(49), ರಾಜಪ್ಪ(66), ಚಿಂತಾಮಣಿ ನಗರದ ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ (55), ಗೋಪಲ್ಲಿಯ ಮುನಿರತ್ನಮ್ಮ (49), ಆಂಧ್ರ ಮೂಲದ ನಾರನ್ನಗಾರಪಲ್ಲಿ ಗ್ರಾಮದ ವೆಂಕಟಲಕ್ಷ್ಮಮ್ಮ (59), ಶ್ರೀನಿವಾಸಪುರ ಮೂಲದ ದಂಪತಿ ನಿಖಿಲ್ (20) ಹಾಗೂ ಮೋನಿಕಾ (28) ಎಂದು ಗುರುತಿಸಲಾಗಿದೆ.

ಈ ಭೀಕರ ಅಪಘಾತದ ಬೆನ್ನಲ್ಲೇ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಜನ ಹೀಗೆ 7 ರಿಂದ 8 ಮಂದಿ ಪ್ರಯಾಣಿಸಬೇಕಾದ ವಾಹನಗಳಲ್ಲಿ 17- 20 ಮಂದಿಯನ್ನು ತುಂಬಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ವೈಟ್ ಪ್ಲೇಟ್ ನಂಬರ್‌ ಇರುವ ವಾಹನವನ್ನು ಬಾಡಿಗೆ ವಾಹನವಾಗಿ ಬಳಸಿರುವುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಒಂದು ವೇಳೆ ಸಿದ್ದರಾಮಯ್ಯ ಗೆದ್ದರೂ ಅವರನ್ನು ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ: ಬಿಎಸ್‌ ಯಡಿಯೂರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights