ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಗ್ರಾಮಾಂತರದಲ್ಲಿ ಉತ್ತಮ ಫಲಿತಾಂಶ!
ಪ್ರಸಕ್ತ ಸಾಲಿನ ಆಗಸ್ಟ್, ಸೆಪ್ಟೆಂಬರ್ನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗ್ರಾಮಾಂತರದಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಇಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 18,413 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5,507 ಮಕ್ಕಳು ತೇರ್ಗಡೆ ಹೊಂದಿದ್ದು, 12,906 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಶೇ. 29.91 ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ ಎಂದರು.
592 ಪ್ರೆಶರ್ಸ್ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 556 ಪ್ರೆಶರ್ಸ್, 183 ರಿಪೀಟರ್ಸ್ ಪಾಸ್ ಆಗಿದ್ದಾರೆ. 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನು ಖಾಸಗಿ ಅಭ್ಯರ್ಥಿಗಳು 17,470 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 4,768 ಜನ ತೇರ್ಗಡೆ ಹೊಂದಿದ್ದು, 12,702 ಮಂದಿ ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಫಲಿತಾಂಶ – ಶೇ 27.29 ಎಂದು ನಾಗೇಶ್ ತಿಳಿಸಿದರು.
ಬಾಲಕರು, ಬಾಲಕೀಯರ ಫಲಿತಾಂಶದಲ್ಲಿ ಭಾರಿ ವ್ಯತ್ಯಾಸ ಇದೆ. ಗ್ರಾಮಾಂತರ ಪ್ರದೇಶದಲ್ಲಿ ಶೇ.32.59, ನಗರದಲ್ಲಿ ಶೇ. 28.62 ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಗ್ರಾಮಾಂತರದಲ್ಲಿ ಉತ್ತಮ ಫಲಿತಾಂಶ ಇದೆ. ಕನ್ನಡ ಮಾಧ್ಯಮದಲ್ಲಿ ಶೇ.31.27 ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶೇ.26.08 ರಷ್ಟು ತೇರ್ಗಡೆಯಾಗಿದ್ದು, ಗ್ರಾಮೀಣ ಭಾಗದವರೇ ಹೆಚ್ಚು.
ಇನ್ನು ವಿಜ್ಞಾನದಲ್ಲಿ 573 ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದ್ದಾರೆ. ವಾಣಿಜ್ಯ – 594, ಕಲಾ – 592 ಹೆಚ್ಚು ಅಂಕ ಪಡೆದಿದ್ದಾರೆ. ವಿಭಾಗವಾರು ಫಲಿತಾಂಶ ಗಮನಿಸಿದಾಗ ಕಲಾ ವಿಭಾಗದಲ್ಲಿ – 12,203 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,912 ಮಕ್ಕಳು ಉತ್ತೀರ್ಣರಾಗಿದ್ದು, ಶೇಕಡಾ 32.6 ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 6,114 ಮಕ್ಕಳು ಪರೀಕ್ಷೆ ಬರೆದಿದ್ದು, 1,527 ಮಕ್ಕಳು ತೇರ್ಗಡೆ ಹೊಂದಿದ್ದು, ಶೇ.24.98 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 68 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ, ಫಲಿತಾಂಶ ಶೇಕಡಾ 70.83 ಎಂದು ವಿವರಿಸಿದರು.

