ಸೆ.27 ಭಾರತ್‌ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ; ಸೋಮವಾರ ಏನಿರತ್ತೆ? ಏನಿರಲ್ಲ?

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ 10ನೇ ತಿಂಗಳನ್ನು ಪೂರೈಸಿದೆ. ಆದರೆ, ಸರ್ಕಾರ ಮಾತ್ರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ, ರೈತ ವಿರೋಧಿ ಧೋರಣೆ ತಳೆದಿದೆ. ಈ ಹಿನ್ನೆಲೆಯಲ್ಲಿ ರೈತರು ಸೆ.27ರಂದು ಭಾರತ್‌ ಬಂದ್‌ಗೆ ಕರೆಕೊಟ್ಟಿದ್ದೂ, ಕರ್ನಾಟಕದಲ್ಲಿಯೂ ರೈತರಿಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ ಮತ್ತು ಎಪಿಎಂಸಿ ವರ್ತಕರ ಸಂಘಗಳು ಭಾರತ್‌ ಬಂದ್‌ಗೆ ಬೆಂಬಲ ನೀಡಿವೆ.

ಅಲ್ಲದೆ, ಹೋಟೆಲ್‌ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಖಾಸಗೀ ಶಾಲೆಗಳ ಸಂಘ, ವಕೀಲರ ಸಂಘಗಳು ಭಾರತ್‌ ಬಂದ್‌ಗೆ ನೈತಿಕ ಬೆಂಬಲ ನೀಡಿವೆ.

ಆದರೆ, ಕೊರೊನಾ, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ಹೋಟೆಲ್‌ಗಳನ್ನು ಬಂದ್‌ ಮಾಡುವುದಿಲ್ಲ. ಲಾರಿಗಳು, ಆಟೋ, ಟ್ಯಾಕ್ಸಿ, ಓಲಾ, ಉಬರ್‌ಗಳು ರಸ್ತೆಗಿಳಿಯಲಿವೆ. ನೈತಿಕವಾಗಿ ಬಂದ್‌ಗೆ ಬೆಂಬಲವಿದೆ ಎಂದು ಸಂಘಟನೆಗಳು ತಿಳಿಸಿವೆ.

ಇನ್ನು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲುಗಳ ಸಂಚಾರ ಇರಲಿದೆ. ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು, ಶಾಲಾ-ಕಾಲೇಜುಗಳು ತೆರೆದಿರುತ್ತವೆ.

ರಾಜ್ಯಾದ್ಯಂತ ಹೆದ್ದಾರಿ ತಡೆಗೆ ಸಂಘಟನೆಗಳು ನಿರ್ಧರಿಸಿವೆ. ಬೆಂಗಳೂರಿನಲ್ಲಿಯೂ ವಿವಿಧ ಹೆದ್ದಾರಿಗಳು ತಡೆಯಲು ಸಂಘಟನೆಗಳು ಮುಂದಾಗಿವೆ. ಆದರೆ, ಬೆಂಗಳೂರಿನಲ್ಲಿ ರಸ್ತೆ ತಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ.

ಆದರೂ, ಸೋಮವಾರ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ ವರೆಗೆ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌, ಫ್ರೀಡಂ ಪಾರ್ಕ್‌, ಆನಂದ್‌ ರಾವ್ ಸರ್ಕಲ್‌ ಸುತ್ತಮುತ್ತ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.

ಇದನ್ನೂ ಓದಿ: 12 ಮುಖ್ಯಮಂತ್ರಿಗಳು ಬಂದು-ಹೋದರು; ಆದರೂ, ಗಡಿ ತಾಲ್ಲೂಕುಗಳಿಗೆ ಹೆಚ್ಚಲಿಲ್ಲ ಅನುದಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights