ಬಂಗಾಳ ಬೈ ಎಲೆಕ್ಷನ್: ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹೋರಾಟ!

ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು (ಗುರುವಾರ) ಉಪಚುನಾವಣೆ ನಡೆಯುತ್ತಿದೆ. ಈ ಪೈಕಿ ಭವಾನಿಪುರ ಕ್ಷೇತ್ರದಿಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದು, ಇಂದಿನ ಚುನಾವಣೆ ಅವರ ಮುಖ್ಯಮಂತ್ರಿ ಹುದ್ದೆಯ ಅಳಿವು-ಉಳಿವಿನ ಪರೀಕ್ಷೆಯಾಗಿದೆ.

ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ, ಸುವೇಂದು ಅಧಿಕಾರಿ ವಿರುದ್ದ ಪರಭಾರೆಗೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ವಿಧಾನಸಭೆಯಲ್ಲಿ ಸದಸ್ಯತ್ವ ಹೊಂದಿಲ್ಲ. ಹೀಗಾಗಿ, ಅವರು ಈ ಉಪ ಸಮರದಲ್ಲಿ ಗೆಲುವು ಸಾಧಿಸಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರೆ ಮಾತ್ರ ಅವರ ಮುಖ್ಯಮಂತ್ರಿ ಖುರ್ಚಿ ಉಳಿಯಲಿದೆ.

ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಪ್ರಿಯಾಂಕ ತಿಬ್ರೆವಾಲ್, ಸಿಪಿಐ(ಎಂ) ಶ್ರೀಜಿಬ್ ಬಿಸ್ವಾಸ್ ಅವರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಅಲ್ಲದೆ, ಭವಾನಿಪುರ ಕ್ಷೇತ್ರದಲ್ಲಿ ಈ ಎಲ್ಲರೂ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಂದು ಬೆಳಗ್ಗೆ ಇಂದಲೇ ಮತದಾನ ಅರಂಭವಾಗಿದೆ. ಇದೂವರೆಗೂ ಶೇ.45 ರಷ್ಟು ಮತದಾನ ನಡೆದಿದೆ ಎಂದು ಹೇಳಲಾಗಿದೆ. ಕ್ಷೇತ್ರದಲ್ಲಿ ಚುನಾವಣಾ ಭದ್ರತೆಗಾಗಿ 75 ಕೇಂದ್ರ ಅರೆ ಸೇನಾಪಡೆಯ ತುಕ್ಕಡಿಗಳನ್ನು ನಿಯೋಜಿಸಲಾಗಿತ್ತು. ಮತಗಟ್ಟೆಗಳ ಸುತ್ತ 200 ಮೀಟರ್ ಅಂತರದವರೆಗೆ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ದ ಮಮತಾ ಬ್ಯಾನರ್ಜಿ ಅವರು ಸೋತ ಬಳಿಕ ಭವಾನಿಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿಎಂಸಿ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರದಿಂದ ಮಮತಾ ಸ್ಪರ್ಧಿಸಿದ್ದಾರೆ. ಅಲ್ಲದೆ, 2011 ಮತ್ತು 2016ರಲ್ಲಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಪಶ್ಚಿಮಬಂಗಾಳದ ಭವಾನಿಪುರ, ಸಂಸೆರ್ಗಂಜ್, ಜಂಗಿಪುರ್ ಕ್ಷೇತ್ರಗಳಲ್ಲಿ ಉಪಚುನಾವಣಾ ಮತದಾನ ನಡೆಯುತ್ತಿದೆ.

ಇದನ್ನೂ ಓದಿ: ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಖಚಿತ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights