ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಖಚಿತ: ಹೆಚ್‌ಡಿಕೆ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದಲ್ಲಿ ಗೆಲವು ಸಾಧಿಸುವುದು ಖಚಿತ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ವತಃ ಆ ಪಕ್ಷದ ನಾಯಕ ರಾಜೀವ್ ಬ್ಯಾನರ್ಜಿ ಹೇಳಿರುವುದರಲ್ಲಿ ಅಚ್ಚರಿಯೇನು ಇಲ್ಲ. ಇದು ಅಪ್ಪಟ ಸತ್ಯ. ಮಮತಾ ಬ್ಯಾನರ್ಜಿ ಅವರು ಕೇವಲ ನಾಯಕಿಯಲ್ಲ, ಸಮಸ್ತ ಬಂಗಾಳಿಗರ ನಾಡಿಮಿಡಿತ. ಈ ಸತ್ಯವನ್ನು ಅರಿಯುವಲ್ಲಿ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.

ಇತಿಹಾಸ ಸೃಷ್ಟಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಮತಾ ಅವರು ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 294 ವಿಧಾಸಭೆ ಕ್ಷೇತ್ರಗಳ ಪೈಕಿ 214 ಸ್ಥಾನಗಳನ್ನು ಜಯಿಸಿದ್ದರು. ಆಗಲೇ ಅವರು ಚರಿತ್ರೆ ಬರೆದಿದ್ದರು. ಈಗ ಹೊಸ ಚರಿತ್ರೆ ಸೃಷ್ಟಿಗೆ ಅಣಿಯಾಗಿದ್ದಾರೆ ಎಂದಿದ್ದಾರೆ.

ಜನರ ಬಾವನೆಗಳನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಂಡು ಗೌರವಿಸಬೇಕು. 2021ರ ಚುನಾವಣೆಯಲ್ಲಿ ಬಂಗಾಳದ ಮಹಾಜನತೆ ಮಮತಾ ಅವರಿಗೆ ಸ್ಪಷ್ಟ ಜನಾದೇಶ ನೀಡಿದ್ದಾಗಿದೆ. ಈ ಉಪ ಚುನಾವಣೆಯಲ್ಲಿ ಯಾವ ಪಕ್ಷವೂ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಬಿಜೆಪಿ ತನ್ನ ಸಂಕುಚಿತ ಮನೋಭಾವ ತೊರೆದು ದೊಡ್ಡತನ ಪ್ರದರ್ಶಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಪ್ರಜಾಬಲಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: “ಆರ್‌ಎಸ್‌ಎಸ್‌ ನಿಷೇಧ?” ಎಂಬ ಮೂರು ಪ್ರಹಸನಗಳು!; ಸರ್ಕಾರಗಳು ಸಂಘ-ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights