ಮುರುಘಾ ಮಠ: ಸಿಎಂ ಬೊಮ್ಮಾಯಿಗೆ ‘ಬಸವಭೂಷಣ’ ಮತ್ತು ಮಾಜಿ ಸಿಎಂ ಬಿಎಸ್‌ವೈಗೆ ‘ಶರಣಶ್ರೀ’ ಪ್ರಶಸ್ತಿ!

ಚಿತ್ರದುರ್ಗದ ಮುರುಘಾ ಮಠದಿಂದ ನೀಡಲಾಗುವು ‘ಬಸವಭೂಷಣ’ ಹಾಗೂ ‘ಶರಣಶ್ರೀ’ ಪ್ರಶಸ್ತಿಗಳನ್ನು ಈ ಬಾರಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ನೀಡಲು ಆಯ್ಕೆ ಮಾಡಲಾಗಿದೆ.

ಅ.18ರಂದು ನಡೆಯುವ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ, ‘ಬಸವಭೂಷಣ’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ‘ಶರಣಶ್ರೀ’ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲು ಮಠವು ಆಯ್ಕೆ ಮಾಡಿದೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

‘ಬಸವಶ್ರೀ’ ಪ್ರಶಸ್ತಿಗೆ ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. 2019ನೇ ಸಾಲಿನ ಪ್ರಶಸ್ತಿಗೆ ರಾಜೀವ್‌ ತಾರಾನಾಥ್‌ ಹಾಗೂ 2020ನೇ ಸಾಲಿಗೆ ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ಹಾಗೂ ಫಲಕ ಒಳಗೊಂಡಿದೆ. ಅ. 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುರುಘಾ ಶರಣರು ತಿಳಿಸಿದ್ದಾರೆ.

‘ಮುರುಘಾಶ್ರೀ’ ಪ್ರಶಸ್ತಿ: ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌, ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಶಿಕಾರಿಪುರ ಜುಬೇದ ವಿದ್ಯಾಸಂಸ್ಥೆಯ ಡಾ.ಅಮ್ಜದ್‌ ಹುಸೇನ್, ದೇಸಿ ಪದಶಕ್ತಿಯ ಶಬ್ದಗಾರುಡಿಗ ಯುಗಧರ್ಮ ರಾಮಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಎಸ್. ನಾಗರತಿನಂ ಅವರನ್ನು ಮುರುಘಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ 7 ವಿಶ್ವದಾಖಲೆ ಮುಡಿಗೇರಿಸಿಕೊಂಡಿರುವ ಬಾಲ ಪ್ರತಿಭೆ ಉಡುಪಿಯ ತನುಶ್ರೀ ಅವರನ್ನು ಭರಮಣ್ಣನಾಯಕ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುರುಘಾಶ್ರೀ ಮತ್ತು ಶೌರ್ಯ ಪ್ರಶಸ್ತಿಯು 25 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಅ.13ರಂದು ಮುರುಘಾಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Read Also: ಜೆಡಿಎಸ್‌ ತೊರೆದು ಬಿಜೆಪಿ ಸೇರುತ್ತೇನೆ: ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights