ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗಿ ಮಾರ್ಪಡುತ್ತದೆ: ಸಚಿವ ಛಗನ್ ಭುಜ್ಬಾಲ್ ವ್ಯಂಗ್ಯ
ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಬಂಧನದಲ್ಲಿದ್ದಾರೆ. ಒಂದು ವೇಳೆ ಶಾರುಖ್ ಖಾನ್ ಬಿಜೆಪಿಗೆ ಸೇರ್ಪಡೆಯಾದರೆ, ಅದೇ ಡ್ರಗ್ಸ್ ಸಕ್ಕರೆ ಪೌಡರ್‌ಆಗಿ ಮಾರ್ಪಡುತ್ತದೆ ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜ್ಬಾಲ್ ಅವರು ಹೇಳಿದ್ದಾರೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿದ್ದಾನೆ. ಆತನಿಗೆ ಜಾಮೀನು ಪಡೆಯಲು ಶಾರುಖ್ ಖಾನ್ ಹರಸಾಹಸ ಪಡುತ್ತಿದ್ದು, ಈಗಾಗಲೇ ಎರಡು ಬಾರಿ ಆತನ ಜಾಮೀನು ಅರ್ಜಿಯನ್ನು ಕೊರ್ಟ್ ತಿರಸ್ಕರಿಸಿದೆ. ಗುಜರಾತ್‌ನ ಮಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ 3,000 ಕೆಜಿ ಹೆರಾಯಿನ್ ಪ್ರಕರಣದ ತನಿಖೆ ನಡೆಸುವ ಬದಲು, ಎನ್‌ಸಿಬಿ ಶಾರೂಖ್ ಖಾನ್‌ರನ್ನು ಬೇಟೆಯಾಡುತ್ತಿದೆ. “ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತದೆ” ಎಂದು ಎನ್‌ಸಿಪಿ ನಾಯಕರಾದ ಭುಜ್ಬಾಲ್ ವ್ಯಂಗ್ಯವಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್‌ರನ್ನು ಮುಂಬೈ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ವೇಳೆ ಅ. 03 ರಂದು ಎನ್‌ಸಿಬಿ ಬಂಧಿಸಿತು. ಅರ್ಯನ್‌ಗೆ ಅ.20ರಂದು ಜಾಮೀನು ಸಿಗದೆ ಮತ್ತೆ ಜೈಲುಪಾಲಾಗಿದ್ದಾರೆ. ಅಲ್ಲದೆ, ಕಳೆದ ಮೂರು ದಿನಗಳ ಹಿಂದೆ ಎನ್‌ಸಿಬಿ ತಂಡ ಶಾರುಖ್ ಖಾನ್ ಅವರ ಮನೆಗೂ ಭೇಟಿ ನೀಡಿತ್ತು.
ಆರ್ಯನ್ ಖಾನ್ ಅವರ ಪ್ರೈಮಾ ಫೇಸಿಯ ವಾಟ್ಸಾಪ್ ಚಾಟ್‌ಗಳಲ್ಲಿ ಆತ “ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ತೊಡಗಿದ್ದಾನೆ” ಮತ್ತು ಆತ ಮಾದಕವಸ್ತು ಮಾರಾಟಗಾರರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ವಿಶೇಷ ನ್ಯಾಯಾಲಯವು ಗಮನಿಸಿದ್ದು, ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ, ಶಾರುಖ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ, ಅ. 26ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಬಿಹಾರ: ಕನ್ಹಯ್ಯಾ, ಜಿಗ್ನೇಶ್, ಹಾರ್ದಿಕ್ ಮೇಲೆ ಕಾಂಗ್ರೆಸ್‌ಗೆ ಬಲವಾದ ನಂಬಿಕೆ; ಆರ್‌ಜೆಡಿ ಜೊತೆ ಮೈತ್ರಿ ಕಟ್!

