ಬಿಹಾರ: ಕನ್ಹಯ್ಯಾ, ಜಿಗ್ನೇಶ್, ಹಾರ್ದಿಕ್ ಮೇಲೆ ಕಾಂಗ್ರೆಸ್‌ಗೆ ಬಲವಾದ ನಂಬಿಕೆ; ಆರ್‌ಜೆಡಿ ಜೊತೆ ಮೈತ್ರಿ ಕಟ್!

ಕಾಂಗ್ರೆಸ್‌‌‌ ಪಕ್ಷಕ್ಕೆ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ್ ಪಟೇಲ್ ಸರ್ಪಡೆಗೊಂಡ ಕೆಲವು ದಿನಗಳಲ್ಲೇ ಪಕ್ಷವು ಬಿಹಾರದಲ್ಲಿ ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ತೊರೆದಿದೆ. ಅಲ್ಲದೆ, ಸದ್ಯದಲ್ಲೇ ನಡೆಯಲಿರುವ ತಾರಾಪುರ ಮತ್ತು ಕುಶೇಶ್ವರ್‌ ಆಸ್ಥಾನ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮುಂದಿನ, 2024 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿಯೇ ಕಾಂಗ್ರೆಸ್‌ ಸ್ಪರ್ಧಿಸುತ್ತದೆ ಎಂದು ಘೋಷಿಸಿಲಾಗಿದೆ.

ಮುಂಬರುವ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಸ್ಟಾರ್ ಪ್ರಚಾರಕರಾಗಿ ಕನ್ಹಯ್ಯಾ, ಜಿಗ್ನೇಶ್ ಮತ್ತು ಹಾರ್ದಿಕ್ ಪಟೇಲ್ ಬಿಹಾರವನ್ನು ತಲುಪಿದ್ದು, ಪಕ್ಷದ ರಾಜಕೀಯ ಕಾರ್ಯತಂತ್ರದಲ್ಲಿ ಮಹತ್ವದ ತಿರುವು ಸಂಭವಿಸಿದೆ.

ಕನ್ಹಯ್ಯಾ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನ ಅಸಮಾಧಾನ ಭುಗಿಲೆದ್ದಿತ್ತು. ಅಕ್ಟೋಬರ್ 30 ರಂದು ಚುನಾವಣೆ ನಡೆಯಲಿರುವ ದರ್ಭಾಂಗಾದ ‘ಕುಶೇಶ್ವರ್ ಆಸ್ಥಾನ’ ವಿಧಾನಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್ ಹಕ್ಕು ಸಾಧಿಸುತ್ತಿದೆ.

ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿಯನ್ನು ನಡೆಸಲೇಬೇಕು: ಬಿಹಾರ ಸಿಎಂ ನಿತೀಶ್ ಕುಮಾರ್

2020 ರ ರಾಜ್ಯ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ ಸ್ಥಾನವಾದ ಕುಶೇಶ್ವರ್‌ ಆಸ್ಥಾನದ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಮೈತ್ರಿಯೊಳಗಿನ ಬಿರುಕು ಮುನ್ನಲೆಗೆ ಬಂದಿದೆ. ಆರ್‌ಜೆಡಿ ಕೂಡಾ ಎರಡೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ.

ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರದ ಹಿರಿಯ ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್,  “ಉಪಚುನಾವಣೆಯ ಎರಡು ಕ್ಷೇತ್ರಗಳಲ್ಲಿಯು ಕಾಂಗ್ರೆಸ್ ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಪಾಠ ಕಲಿತಿದೆ. ದೀರ್ಘಕಾಲದವರೆಗೆ ಯಾವುದೇ ಪಕ್ಷದ ಊರುಗೋಲನ್ನು ಅವಲಂಬಿಸುವುದು ಸೂಕ್ತವಲ್ಲ” ಎಂದು ಅವರು ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷವು ತನ್ನ ನಾಯಕರಾದ ಕನ್ಹಯ್ಯಾ ಕುಮಾರ್ ಮತ್ತು ಇತರರೊಂದಿಗೆ ಕುಶೇಶ್ವರ ಆಸ್ಥಾನ ಮತ್ತು ತಾರಾಪುರದ ಎರಡೂ ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಲು ಸಜ್ಜಾಗಿದೆ. ನಮ್ಮ ಪಕ್ಷವು ಆರ್‌ಜೆಡಿಯೊಂದಿಗೆ ಸ್ನೇಹಯುತ ಹೋರಾಟ ಮಾಡುತ್ತಿಲ್ಲ. ಬದಲಾಗಿ ನಾವು ಬೃಹತ್ ಪ್ರಮಾಣದಲ್ಲಿ ಜನರ ಬೆಂಬಲದ ಮೂಲಕ ಗೆಲ್ಲಲು ಹೋರಾಡುತ್ತಿದ್ದೇವೆ” ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಭಕತ್ ಚರಣ್ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಎನ್‌ಡಿಎಯಲ್ಲಿ ಬಿರುಕು? ಶಾಸಕಾಂಗ ಸಭೆ ಬಹಿಷ್ಕರಿಸಿದ ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ!

ಪಕ್ಷದ ಆರಂಭಿಕ ಪ್ರಚಾರಕರಾಗಿ ಬಿಹಾರಕ್ಕೆ ಆಗಮಿಸಿದ ಪಕ್ಷದ ಮೂವರು ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ್ ಪಟೇಲ್ ಅವರ ಬಗ್ಗೆ ನಂಬಿಕೆ ಹೊಂದಿರುವ ಚರಣ್‌ ದಾಸ್, ಕಾಂಗ್ರೆಸ್ ಪಕ್ಷವು 2024 ರಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.

“ಕಾಂಗ್ರೆಸ್ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಎನ್‌ಡಿಎಯನ್ನು ಎದುರಿಸಲು ತಯಾರಿ ನಡೆಸುತ್ತಿದೆ. ನಮ್ಮ ಪಕ್ಷವು ಹಳೆಯ ರಾಷ್ಟ್ರೀಯ ಪಕ್ಷವಾಗಿರುವುದರಿಂದ, ರಾಷ್ಟ್ರವನ್ನು ಉಳಿಸುವುದು ಮತ್ತು ರಾಜ್ಯವನ್ನು ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಚರಣ್‌ ದಾಸ್ ಹೇಳಿದ್ದಾರೆ.

ಕಾಂಗ್ರೆಸ್ಸಿನ ಮೂವರು ಹೊಸ ನಾಯಕರ ಮೇಲೆ ನಂಬಿಕೆ ಇಟ್ಟಿರುವ ಚರಣ್‌ ದಾಸ್, ಕನ್ಹಯ್ಯ, ಜಿಗ್ನೇಶ್ ಮತ್ತು ಪಟೇಲ್ ಖಂಡಿತವಾಗಿಯೂ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಹೇಳಿದ್ದಾರೆ.

ಈ ನಡುವೆ, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಯೊಂದಿಗೆ ಆರ್‌ಜೆಡಿಯು ಹೊಸ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯ ಒಡಕು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು TNIE ವರದಿ ಮಾಡಿದೆ.

ಇದನ್ನೂ ಓದಿ:6 ಜಿಲ್ಲೆಗಳು ನಕ್ಸಲ್‌ ಮುಕ್ತವಾಗಿವೆ: ಬಿಹಾರ ಗೃಹ ಸಚಿವಾಲಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights