ಯಡಿಯೂರಪ್ಪ, ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿದ್ದ ಹಿರಿಯ ನಾಯಕ ಪ್ರೊಫೆಸರ್ ಮುಮ್ತಾಜ್ ಅಲಿಖಾನ್ ನಿಧನ

ರಾಜ್ಯ ಅಲ್ಪಸಂಖ್ಯಾತರ ಹಜ್ ಮತ್ತು ವಕ್ಫ್ ಖಾತೆ ಸಚಿವ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ, ಬಿಜೆಪಿ ನಾಯಕ ಪ್ರೊಫೆಸರ್ ಮುಮ್ತಾಜ್ ಅಲಿಖಾನ್ ಅವರು ಸೋಮವಾರ ನಿಧನ ಹೊಂದಿದ್ದಾರೆ.

98 ವರ್ಷದ ಅಲಿಖಾನ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಅವರ ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಬಿಜೆಪಿಯಿಂದ ಸದಸ್ಯರಾಗಿ ನಾಮ ನಿರ್ದೇಶಿತಗೊಂಡಿದ್ದ ಇವರು, 2008 ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ರಾಜ್ಯ ಅಲ್ಪಸಂಖ್ಯಾತರ ಹಜ್ ಮತ್ತು ವಕ್ಫ್ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದರು.

ನಂತರ, ಬಿಜೆಪಿಯಲ್ಲಿ ನನಗೆ ಅನ್ಯಾಯವಾಗಿದೆ. ಅದರಲ್ಲೂ ಕೆ. ಎಸ್. ಈಶ್ವರಪ್ಪ ಅವರಿಂದ ನನಗೆ ಬಹಳ ಅನ್ಯಾಯವಾಗಿದೆ. ಆದ್ದರಿಂದ ಪಕ್ಷ ಬಿಡುತ್ತಿದ್ದೇನೆ’ ಎಂದು ಆರೋಪಿಸಿ  2013ರಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದಾದ ಬಳಿಕ ಕಾಂಗ್ರೆಸ್‌ ಸೇರಿದ್ದ ಅಲಿ ಖಾನ್‌, 2015ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆಯುತ್ತಿದ್ದ, ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷವನ್ನೂ ತೊರೆದಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅದರಲ್ಲಿ ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ, ಕಂದಾಯ ಭವನ, ಹೊರವಲಯದಲ್ಲಿರುವ ಮೇಗಾ ಡೇರಿ ನಿರ್ಮಿಸಲು ದಾಖಲೆಗಳ ಹಸ್ತಾಂತರ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ನೆರವೇರಿಸಿದ ಕೀರ್ತಿ ಅವರದ್ದಾಗಿತ್ತು.

ಅಲ್ಲದೆ, ಇವರು ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ದಸರಾ ಪ್ರಶಸ್ತಿ-ಸಮಾಜ ಸೇವೆ-ಕರ್ನಾಟಕ ಸರ್ಕಾರ (1992), ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ (2002), ಶ್ರೀ ಜಿ. ನಾರಾಯಣ ಕುಮಾರ್‌ ಸಂಸ್ಥೆಯಿಂದ ಸಮಾಜ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1993) ಸೇರಿದಂತೆ ವಿವಿಧ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಪದಚ್ಯುತಿ?; ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬೇಡಿಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights