ಜೆ.ಪಿ.ನಡ್ಡಾ ಕಾರಿನ ಮೇಲೆ ದಾಳಿ; ಅಧಿಕಾರಗಳನ್ನು ವಿಚಾರಣೆಗೆ ದೆಹಲಿಗೆ ಕಳಿಸಲ್ಲ ಎಂದ ಮಮತಾ ಸರ್ಕಾರ

ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ನಡೆದಿತ್ತು. ಈ ಹಿನ್ನಲೆಯಲ್ಲಿ, ಪಶ್ಚಿಮ ಬಂಗಾಳದ ಪೊಲೀಸ್ ಮಹಾ ನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ವಿಚಾರಣೆಗೆ ಹಾಜರಾಗಬೇಕು ಎಂಬ ಸಮನ್ಸ್‌ ನೀಡಿತ್ತು. ಈ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಸರ್ಕಾರ, ಯಾವುದೇ ಅಧಿಕಾರಿ ದೆಹಲಿಗೆ ತೆರಳಿ ಗೃಹ ಸಚಿವಾಲಯದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೋಲ್ಕತ್ತದಿಂದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದ ಜೆ ಪಿ ನಡ್ಡಾ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿತ್ತು. ಭದ್ರತಾ ವೈಫಲ್ಯದ ಕುರಿತು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಹಾಗೂ ಹಿರಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯದ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಕೇಂದ್ರ ನೋಟಿಸು ಜಾರಿ ಮಾಡಿತ್ತು.

ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಬಂಗಾಳ ಸರ್ಕಾರದ ಉನ್ನತ ಅಧಿಕಾರಿ ಅಲಪನ್ ಬಂಡ್ಯೋಪಾಧ್ಯಾಯ, “ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಈಗಾಗಲೇ ಈ ಸಮಸ್ಯೆಯನ್ನು ಅತ್ಯಂತ ಗಂಭೀರತೆಯಿಂದ ಪರಿಹರಿಸುತ್ತಿದೆ. ದಾಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಏಳು ಜನರನ್ನು ಬಂಧಿಸಲಾಗಿದೆ. ಗೃಹ ಸಚಿವಾಲಯ ಡಿಸೆಂಬರ್ 14 ರಂದು ಕರೆದಿರುವ ಸಭೆಯಲ್ಲಿ ರಾಜ್ಯದ ಅಧಿಕಾರಿಗಳ ಉಪಸ್ಥಿತಿ ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Read Also: ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋಮಾಂಸ ರಫ್ತು ಹೆಚ್ಚಾಗಿದೆ: ಸಿದ್ದರಾಮಯ್ಯ

ಗುರುವಾರ ಬಂಗಾಳಕ್ಕೆ ಆಗಮಿಸಿದ್ದ ಜೆ.ಪಿ ನಡ್ಡಾ ಅವರಿಗೆ ಝಡ್‌ ಕ್ಯಾಟಗರಿ ಭದ್ರತೆ ನೀಡಲಾಗಿದೆ. ಅವರಿಗೆ ಬುಲೆಟ್‌ಫ್ರೂಫ್ ಕಾರ್ ನೀಡಲಾಗಿತ್ತು. ಬೆಂಗಾವಲು ಮತ್ತು ಭದ್ರತಾ ಅಧಿಕಾರಿಗಳನ್ನೂ ನೇಮಕ ಮಾಡಲಾಗಿತ್ತು. ಅವರು ಚಲಿಸುವ ಮಾರ್ಗದಲ್ಲಿ ನಾಲ 4 ಎಸ್ಪಿಗಳು, 8 ಡೆಪ್ಯೂಟಿ ಎಸ್ಪಿಗಳು, 14 ಇನ್ಸ್ಪೆಕ್ಟರ್‌ಗಳು, 70 ಸಬ್ಇನ್ಸ್ಪೆಕ್ಟರ್‌‌ಗಳು, 40 ಆರ್‌‌ಎಎಫ್ ಸಿಬ್ಬಂದಿ, 259 ಕಾನ್ಸ್ಟೆಬಲ್‌‌ಗಳು ಮತ್ತು 350 ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಭದ್ರತೆಯ ಮೇಲ್ವಿಚಾರಣೆಗೆ ಡಿಐಜಿಯನ್ನು ನಿಯೋಜಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜೆ.ಪಿ ನಡ್ಡಾ ವಾಹನಗಳ ಜೊತೆಗೆ ಇತರೆ ವಾಹನಗಳನ್ನೂ ನಿಯೋಜಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿತು ಎಂದು ಬಂಗಾಳ ಸರ್ಕಾರ ಈಗಾಗಲೇ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

ಘಟನೆಯ ಬಗ್ಗೆ ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಇದನ್ನು ‘ಯೋಜಿತ ಪಿತೂರಿ’ ಎಂದು ಕರೆದು, ಭದ್ರತಾ ವೈಫಲ್ಯದ ಆರೋಪ ಕುರಿತಂತೆ ವರದಿ ಸಲ್ಲಿಸಿ ಎಂದು ಪಶ್ಷಿಮ ಬಂಗಾಳ ರಾಜ್ಯಪಾಲರಿಗೆ ಸೂಚನೆ ನೀಡಿದ್ದರು.


ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್‌ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಬಿಟಿಪಿ ಪಕ್ಷ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights