ಕರ್ನಾಟಕದಲ್ಲೂ ಶತಕ ಬಾರಿಸಿದ ಪೆಟ್ರೋಲ್ ದರ; ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂ.!
ಕೊರೊನಾ ಲಾಕ್‌ಡೌನ್ ನಡುವೆಯೂ ಇಂಧನ ಬೆಲೆ ಏರುತ್ತಲೇ ಇದೆ. ಈ ಹಿಂದೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿತ್ತು. ಇದೀಗ ಈ ಪಟ್ಟಿಗೆ ಕರ್ನಾಟಕವು ಸೇರಿದ್ದು, ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿಕೆಯಾಗಿದೆ.
ಅಲ್ಲದೆ, ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ದರ 97 ರೂಪಾಯಿ 92 ಪೈಸೆಯಾಗಿದ್ದರೆ, ಡೀಸೆಲ್ ಬೆಲೆ 90 ರೂಪಾಯಿ 81 ಪೈಸೆಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದಂತೆ ಭಾರತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 95 ರೂಪಾಯಿ 31 ಪೈಸೆಗೆ ತಲುಪಿದೆ. ಡೀಸೆಲ್ ದರ ಲೀಟರ್ ಗೆ 86 ರೂಪಾಯಿ 22 ಪೈಸೆಯಷ್ಟಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಗೆ 95 ರೂಪಾಯಿ 28 ಪೈಸೆ, ಡೀಸೆಲ್ ಬೆಲೆ ಲೀಟರ್ ಗೆ 89 ರೂಪಾಯಿ 07 ಪೈಸೆಯಷ್ಟಿದೆ. ಚೆನ್ನೈಯಲ್ಲಿ ಪೆಟ್ರೋಲ್ ಲೀಟರ್ ಗೆ 96 ರೂಪಾಯಿ 71 ಪೈಸೆಯಷ್ಟಿದ್ದರೆ, ಡೀಸೆಲ್ ಬೆಲೆ 90 ರೂಪಾಯಿ 92 ಪೈಸೆಯಷ್ಟಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿ 101 ರೂಪಾಯಿ 52 ಪೈಸೆಯಷ್ಟಾಗಿದ್ದರೆ, ಡೀಸೆಲ್ ಬೆಲೆ 93 ರೂಪಾಯಿ 58 ಪೈಸೆಯಷ್ಟಾಗಿದೆ.
ಇದನ್ನೂ ಓದಿ: ಸುಸ್ಥಿರ ಅಭಿವೃದ್ದಿ ಪಟ್ಟಿಯಲ್ಲಿ ಭಾರತಕ್ಕೆ ಭಾರೀ ಕುಸಿತ; ನೇಪಾಳ, ಶ್ರೀಲಂಕಕ್ಕಿಂತ ಹಿಂದೆ ಸರಿದ ಭಾರತ!