ಮತಗಟ್ಟೆಗೆ 5 ಲಕ್ಷ; ಒಂದು ಓಟಿಗೆ ಒಂದು ಸಾವಿರ; ಸಿಂಧಗಿಯಲ್ಲಿ ಬಿಜೆಪಿ ಹಣದ ಹೊಳೆ: ಹೆಚ್ಡಿಕೆ ಆರೋಪ
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಆದರೂ, ಆಡಳಿತಾರೂಢ ಬಿಜೆಪಿಯು ಸಿಂಧಗಿಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುವ ಹೀನ ಕೆಲಸಕ್ಕೆ ಮುಂದಾಗಿದೆ. ಒಂದು ಮತಗಟ್ಟೆ 5 ಲಕ್ಷ ಹಾಗೂ ಒಂದು ಮತಕ್ಕೆ 1000 ರೂ. ಹಂಚಿಕೆ ಮಾಡಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ಪ್ರತಿ ಹಳ್ಳಿಗೆ 30 ರಿಂದ 40 ಲಕ್ಷ ರೂಪಾಯಿ ಹಂಚಿಕೆ ಆಗಿದೆ. ಖುದ್ದು ಸಚಿವರೇ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ ಎಂದು ಹೇಳಿದ್ದಾರೆ.
ಕೆಲ ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಪ್ರತೀ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ ಹಾಗೂ ಒಂದು ಮತಕ್ಕೆ 1,000 ರೂ. ಫಿಕ್ಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರಕಾರ ರಚನೆ ಮಾಡಿದ ಮೇಲೆ ಎಲ್ಲ ಚುನಾವಣೆಗಳನ್ನು ಗೆದ್ದಿರುವುದು ಹಣದ ಹೊಳೆ ಹರಿಸಿಯೇ ಎಂದು ಹೆಚ್ಡಿಕೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ: ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪ
ಸಚಿವ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂತ್ರಿಗಳು ಇಂದಿಗೂ ಸಿಂದಗಿಯ ಸಮೀಪದಲ್ಲಿರುವ ರೆಸಾರ್ಟ್ನಲ್ಲಿಯೇ ಇದ್ದಾರೆ. ಹಣಹಂಚಿಕೆಯಲ್ಲಿ ಸಚಿವರುಗಳೂ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ ಸಂಜೆವರೆಗೂ ಕುಮಾರಸ್ವಾಮಿ ಅವರಿಗೆ ಸಿಂಧಗಿಯಲ್ಲಿ ಓಡಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಗುರುವಾರದಿಂದ ನಮ್ಮ ಆಟ ತೋರಿಸುತ್ತೇವೆ ಎಂದು ಸೋಮಣ್ಣ ಮಂಗಳವಾರ ಹೇಳಿದ್ದರು. ಈಗ ಅವರು ತಮ್ಮ ಆಟ ತೋರಿಸಲು ಹೊರಟಿದ್ದಾರೆ. ಹಣ ಹಂಚುವುದೇ ಅವರ ಆಟ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.
ಏನೇ ಆದರೂ ಕ್ಷೇತ್ರದ ಮತದಾರರು ಹಣಕ್ಕಿಂತ ಹೆಚ್ಚಾಗಿ ತಮಗೆ ಬದುಕು ತೋರಿಸಿರುವ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ. ದೇವೇಗೌಡರು ಹಾಗೂ ನಾನು ನೀಡಿರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅಭಿಮಾನ ಇದೆ. ಈವರೆಗೂ ನಾನು ಎಂಬತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದೇನೆ. ಎಲ್ಲೇ ಹೋದರೂ ಜನ ನಮ್ಮ ಪಕ್ಷ ನೀಡಿರುವ ಕೊಡುಗೆಗಳ ಬಗ್ಗೆಯೇ ಮಾತನಾಡುತ್ತಾರೆ. ರಾಷ್ಟ್ರೀಯ ಪಕ್ಷಗಳು ಒಡ್ಡುವ ಆಮಿಷಗಳಿಗೆ ಜನರು ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾನಗಲ್-ಸಿಂದಗಿ: ಸ್ಥಿರ ಸರ್ಕಾರ ಇದ್ದರೂ ಬಿಜೆಪಿಗೆ ಬೈ-ಎಲೆಕ್ಷನ್ ಸವಾಲು!; ಕಾರಣ ಹೀಗಿವೆ!

