ಹಾನಗಲ್-ಸಿಂದಗಿ: ಸ್ಥಿರ ಸರ್ಕಾರ ಇದ್ದರೂ ಬಿಜೆಪಿಗೆ ಬೈ-ಎಲೆಕ್ಷನ್ ಸವಾಲು!; ಕಾರಣ ಹೀಗಿವೆ!

ರಾಜ್ಯ ವಿಧಾನಸಭೆಯಲ್ಲಿ ಬಹುಮತದ ಸಂಖ್ಯಾಬಲವನ್ನು ಬಿಜೆಪಿ‌ ಹೊಂದಿದೆ. ಆದರೂ, ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆ‌ ಇದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಹಾಗೂ ಬೊಮ್ಮಾಯಿ ಅವರು ಸಿಎಂ ಆದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಈ ಉಪಚುನಾವಣೆ ವಿವಿಧ ಕಾರಣಗಳಿಂದ ಬಿಜೆಪಿಗೆ ಮುಖ್ಯವಾಗಿದೆ. ಅದೇ ರೀತಿಯಲ್ಲಿ ಈ ಉಪ ಸಮರವನ್ನು ಗೆಲ್ಲಲು ವಿರೋಧ ಪಕ್ಷಗಳು‌ ಹವಣಿಸುತ್ತಿವೆ.

ಈ ಬೈ-ಎಲೆಕ್ಷನ್ 2023ರ ಚುನಾವಣೆಗೆ ದಿಕ್ಸೂಚಿಯನ್ನು ನೀಡಲಿದೆ. ಅಲ್ಲದೆ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಜನಮನ್ನಣೆ ಇದೆಯೇ? ಬಸವರಾಜ ಬೊಮ್ಮಾಯಿ ನಾಯಕತ್ವ ಗಟ್ಟಿಯಾಗಿದೆಯಾ ಎಂಬುದನ್ನು ಉಪಚುನಾವಣೆ‌ ಸ್ಪಷ್ಟಪಡಿಸಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿಗೆ ಗೆಲುವಿನ ಅನಿವಾರ್ಯತೆ ಇದೆ.

ಮೈತ್ರಿ ಸರ್ಕಾರ ಪತನದ ನಂತರ 105 ಸಂಖ್ಯಾ ಬಲವಿದ್ದ ಬಿಜೆಪಿ, ಸರ್ಕಾರ ರಚನೆ ಮಾಡಿ ನಂತರ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದು, ಅಗತ್ಯ ಬಹುಮತ ಪಡೆದುಕೊಳ್ಳುವಲ್ಲಿ ಸಫಲವಾಗಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ನಡೆದ ಚುನಾವಣೆಯಲ್ಲಿ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳೂ ಬಿಜೆಪಿ ಪಾಲಾದವು, ಮಸ್ಕಿ, ಬಸವ ಕಲ್ಯಾಣ ಕ್ಷೇತ್ರದ ಅಖಾಡದಲ್ಲಿ ಮಸ್ಕಿಯಲ್ಲಿ ಪರಾಭವಗೊಂಡರೂ ಕಲ್ಯಾಣದಲ್ಲಿ ಗೆದ್ದು ಬೀಗಿತು.

ಬೆಳಗಾವಿ ಲೋಕಸಭಾ ಕ್ಷೇತ್ರವನ್ನೂ ಉಪ ಸಮರದಲ್ಲಿ ಉಳಿಸಿಕೊಂಡಿತು. ಯಡಿಯೂರಪ್ಪ ನಾಯಕತ್ವ ಇದ್ದಾಗ ನಡೆದ 20 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೇವಲ 4 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಸೋತಿದೆ.

ಬಿಎಸ್‍ವೈ ಜಾಗದಲ್ಲಿ ಈಗ ಬೊಮ್ಮಾಯಿ ಇದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಗೃಹ ಖಾತೆ ನಿರ್ವಹಿಸುತ್ತಿದ್ದ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ನೂತನ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದೆ.

ಸರ್ಕಾರದ ಆಡಳಿತಕ್ಕೆ ಜನತೆ ನೀಡುವ ತೀರ್ಪು ಈ ಉಪಸಮರದ ಫಲಿತಾಂಶದಿಂದ ಗೊತ್ತಾಗಲಿದೆ. ಹಾಗಾಗಿ ಯಾವ ಕಾರಣಕ್ಕೂ ಉಪ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎಂದು ಆಡಳಿತಾರೂಢ ಪಕ್ಷ ಬಿಜೆಪಿ ಟೊಂಕ ಕಟ್ಟಿ ಪ್ರಚಾರದಲ್ಲಿ ನಿತರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.