ಅಸ್ಸಾಂ ವಿಧಾನಸಭಾ ಉಪಚುನಾವಣೆ: ಎಲ್ಲಾ ಐದು ಸ್ಥಾನಗಳಲ್ಲೂ ಬಿಜೆಪಿ ಮತ್ತು ಮಿತ್ರಪಕ್ಷಗಳು ಗೆಲುವು!
ಅಸ್ಸಾಂನಲ್ಲಿ ಐದು ಸ್ಥಾನಗಳಿಗೆ ನಡೆದಿದ್ದ ವಿಧಾನಸಭಾ ಉಪಚುನಾವಣೆಯಲ್ಲಿ ಐದೂ ಸ್ಥಾನಗಳಲ್ಲೂ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವು ಸಾಧಿಸಿವೆ.
ಬಿಜೆಪಿ ಅಭ್ಯರ್ಥಿಗಳಾದ ಫಣಿಧರ್ ತಾಲೂಕ್ದಾರ್, ರೂಪಜ್ಯೋತಿ ಕುರ್ಮಿ ಮತ್ತು ಸುಶಾಂತ ಬೊರ್ಗೊಹೈನ್ ಅವರು ಕ್ರಮವಾಗಿ ಭಬಾನಿಪುರ, ಮರಿಯಾನಿ ಮತ್ತು ಥೌರಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಮೂವರು ಈ ವರ್ಷದ ಮಾರ್ಚ್-ಏಪ್ರಿಲ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಟಿಕೆಟ್ನಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ, ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು.
ಬಿಜೆಪಿ ಮಿತ್ರ ಪಕ್ಷವಾದ ಯುಪಿಪಿಎಲ್ನ ಅಭ್ಯರ್ಥಿಗಳಾದ ಜಿರಾನ್ ಬಸುಮತರಿ ಮತ್ತು ಜೋಲೆನ್ ಡೈಮರಿ ಕ್ರಮವಾಗಿ ಗೊಸ್ಸೈಗಾಂವ್ ಮತ್ತು ತಮುಲ್ಪುರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮೂರು ಶಾಸಕರ ರಾಜೀನಾಮೆ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಇಬ್ಬರು ಹಾಲಿ ಶಾಸಕರ ಸಾವಿನಿಂದಾಗಿ ಉಪಚುನಾವಣೆ ಅಕ್ಟೋಬರ್ 30ರಂದು ನಡೆದಿತ್ತು.
ಅಸ್ಸಾಂನ ಐದು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಸುಮಾರು ಎಂಟು ಲಕ್ಷ ಮತದಾರರಲ್ಲಿ ಅಂದಾಜು 74.04% ರಷ್ಟು ಮತದಾನವಾಗಿತ್ತು.
ಒಟ್ಟಾರೆಯಾಗಿ, 31 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ತಲಾ ಎಂಟು ಮಂದಿ ಗೋಸಾಯಿಗಾಂವ್ ಮತ್ತು ಭಬಾನಿಪುರದಲ್ಲಿ, ಆರು ಮಂದಿ ತಾಮುಲ್ಪುರದಲ್ಲಿ, ಐವರು ಥೌರಾ ಮತ್ತು ನಾಲ್ವರು ಮರಿಯಾನಿಯಲ್ಲಿ ಸ್ಪರ್ಧಿಸಿದ್ದರು.
ಚುನಾವಣಾ ಪೂರ್ವದಲ್ಲಿ, ಅಧಿಕಾರಿಗಳು ಕ್ಷೇತ್ರಗಳಾದ್ಯಂತ ವಿವಿಧ ಸ್ಥಳಗಳಲ್ಲಿ 1.71 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಸ್ಸಾಂ ಮುಖ್ಯ ಚುನಾವಣಾಧಿಕಾರಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಗೋವಾ ಚುನಾವಣೆ: ಎಎಪಿ ಗೆದ್ದರೆ ಅಯೋಧ್ಯೆ ಮತ್ತು ಇತರ ಕ್ಷೇತ್ರಗಳಿಗೆ ಉಚಿತ ಯಾತ್ರೆ!

