ಬಡತನ ಮೆಟ್ಟಿ ನಿಂತು ಟೋಕಿಯೋ ಒಲಿಂಪಿಕ್ಸ್ ಗೆ ಟಿಕೆಟ್ ಕಲೆಕ್ಟರ್ ರೇವತಿ ವೀರಮಣಿ ಆಯ್ಕೆ!
ಬಡತನ ಮೆಟ್ಟಿ ನಿಂತು ಟೋಕಿಯೋ ಒಲಿಂಪಿಕ್ಸ್ ಗೆ ಟಿಕೆಟ್ ಕಲೆಕ್ಟರ್ ತಮಿಳುನಾಡಿನ ಮಧುರೈ ನಿವಾಸಿ ರೇವತಿ ವೀರಮಣಿ ಆಯ್ಕೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜುಲೈ 23ರಿಂದ ನಡೆಯಲಿರುವ ಜಪಾನ್ನ ಟೋಕಿಯೋದಲ್ಲಿ ಒಲಿಂಪಿಕ್ಸ್ ಗೆ ಭಾರತದಿಂದ ನೂರಾರು ಅಥ್ಲೀಟ್ಗಳು ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಇದೀಗ ದಕ್ಷಿಣ ರೈಲ್ವೇ ಟಿಕೆಟ್ ಕಲೆಕ್ಟರ್ ರೇವತಿ ವೀರಮಣಿ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.
ತಮ್ಮ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ರೇವತಿ ವೀರಮಣಿ ಅಜ್ಜಿ ಮನೆಯಲ್ಲಿ ಬೆಳೆದಿದ್ದಾರೆ. ದಿನದ ಒಂದು ಹೊತ್ತು ಊಟಕ್ಕೂ ಕಷ್ಟ ಪಟ್ಟಿದ್ದಾರೆ. ಶಾಲೆಯಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದ ರೇವತಿ ವೀರಮಣಿ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದರು. 12ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟದ 100 ಮೀಟರ್ ರೇಸ್ನಲ್ಲಿ ಭಾಗಿಯಾಗಿದ್ದರು. ಇವರ ಪ್ರತಿಭೆ ಗುರುತಿಸಿದ ಕೋಚ್ ಕೆ. ಕಣ್ಣನ್ ಇವರಿಗೆ ಸಲಹೆ ನೀಡುವ ಜೊತೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಇದರ ಫಲವಾಗಿ 2016ರಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಓಟದಲ್ಲಿ 100 ಹಾಗೂ 200 ಮೀಟರ್ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಾರೆ. ಇದಾದ ಬಳಿಕ 2019ರಲ್ಲಿ ಏಷ್ಯನ್ ಚಾಂಪಿಯನ್ಸ್ನಲ್ಲಿ 4X100 ಮೀಟರ್ ರಿಲೇಯಲ್ಲಿ 4ನೇ ಸ್ಥಾನ ಪಡೆದುಕೊಳ್ಳುತ್ತಾರೆ.
ಇದಾದ ಬಳಿಕ 2019ರಲ್ಲೇ ರೈಲ್ವೇ ಇಲಾಖೆಯಲ್ಲಿ ಕೆಲಸ ಪಡೆದುಕೊಂಡು ಅಭ್ಯಾಸ ಆರಂಭಿಸಿರುವ ರೇವತಿ ಸದ್ಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸ್ಟಾರ್ ಆಟಗಾರ್ತಿ ಹಿಮಾದಾಸ್ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
ರೇವತಿ ವೀರಮಣಿ ಅವರೊಂದಿಗೆ ಸುಭಾ ವೆಂಕಟೇಶನ್ ಮತ್ತು ಎಸ್. ಶ್ರೀಮತಿ ರೇವತಿ ದಕ್ಷಿಣ ರೈಲ್ವೆಯ ಮಧುರೈ ವಿಭಾಗದಲ್ಲಿ ವಾಣಿಜ್ಯ ಗುಮಾಸ್ತ-ಕಮ್-ಟಿಕೆಟ್ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಐದು ಕ್ರೀಡಾಪಟುಗಳಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿ ಪ್ರೋತ್ಸಾಹ ನೀಡಿದ್ದಾರೆ.
“ಮೊದಲ ಬಾರಿಗೆ, ತಮಿಳುನಾಡಿನ ಕ್ರೀಡಾಪಟು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದು ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಜಾನ್ ಥಾಮಸ್ ಶುಭಕೋರಿದ್ದಾರೆ.