ರೈತಾಂದೋಲನ ವಾರ್ಷಿಕೋತ್ಸವ: ದೆಹಲಿ ಗಡಿಗಳಲ್ಲಿ ರೈತರಿಂದ ರಕ್ತದಾನ!
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಹೋರಾಟ ಇಂದಿಗೆ ಒಂದು ವರ್ಷವಾಗಿದೆ. ಪಂಜಾಬ್-ಹರಿಯಾಣ ಸೇರಿದಂತೆ ವಿವಿಧ ರಾಜ್ಯದ ರೈತರು ಕಳೆದ ಒಂದು ವರ್ಷದಿಂದ ಸಿಂಘು ಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಸತತ ಹೋರಾಟದಲ್ಲಿ ತೊಡಗಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಆಶ್ವಾಸನೆ ನೀಡಿದ್ದರೂ ಸಹ ರೈತರು ಮಾತ್ರ ತಮ್ಮ ಇನ್ನಿತರೆ ಬೇಡಿಕೆಗಳೂ ಈಡೇರುವವರೆಗೆ ಹೋರಾಟದ ಕಣದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಆರಂಭವಾಗಿದ್ದ ರೈತರ “ಐತಿಹಾಸಿಕ ಹೋರಾಟ”ಕ್ಕೆ ಇಂದಿಗೆ ಒಂದು ವರ್ಷವಾಗಿದ್ದು, ಗುರುವಾರ ಅನೇಕ ಟ್ರಾಕ್ಟರ್ಗಳು, ಜೀಪ್ಗಳು ಮತ್ತು ಕಾರುಗಳ ಮೂಲಕ ಪಂಜಾಬ್ನಿಂದ ಹೊರಟು ಅಸಂಖ್ಯಾತ ರೈತರು ಇಂದು ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಿಗೆ ಆಗಮಿಸಿದ್ದಾರೆ.
ದೇಶದಾದ್ಯಂತ ಅನೇಕ ಕಡೆಗಳನ್ನು ಸಭೆ ಸಮಾರಂಭಗಳು ಮತ್ತು ಬೈಕ್ ಜಾಥಗಳನ್ನು ನಡೆಸುವ ಮೂಲಕ ರೈತ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಾಗಿದೆ. ಹೋರಾಟದ ಮೂಲ ಕಣವಾದ ದೆಹಲಿಯ ಸಿಂಘು ಗಡಿಯಲ್ಲೂ ಸಹ ಹೋರಾಟಗಾರರು ಇಂದು ಬೆಳಗ್ಗೆಯಿಂದ ರಕ್ತದಾನ ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಹೋರಾಟವನ್ನು ಮತ್ತಷ್ಟು ಸ್ಮರಣೀಯಗೊಳಿಸುತ್ತಿದ್ದಾರೆ.
ರಕ್ತದಾನದ ಮೂಲಕ ಹೋರಾಟವನ್ನು ಸ್ಮರಣೀಯಗೊಳಿಸಿದ ರೈತರು:
ರೈತ ಹೋರಾಟ-ಆಂದೋಲನ ಆರಂಭವಾಗಿ ಒಂದು ವರ್ಷವಾದ ಕಾರಣ ಇಂದು ಸಿಂಘು, ಟಿಕ್ರಿ ಮತ್ತು ಘಾಜೀಪುರ ಗಡಿಗಳಲ್ಲಿ ಇಂದು ರೈತರು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದರು. ಅಲ್ಲದೆ, ಅಂಸಖ್ಯಾತ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ತಮ್ಮ ಹೋರಾಟವನ್ನು ಸ್ಮರಣೀಯಗೊಳಿಸಿದ್ದಾರೆ. ಅಲ್ಲದೆ, ಒಂದಷ್ಟು ಜನ ಸಿಖ್ ಸಂಪ್ರದಾಯದಂತೆ ಪ್ರಾರ್ಥನೆ ನಡೆಸಿದ್ದ ದೃಶ್ಯಗಳೂ ಸಹ ಗಡಿಯಲ್ಲಿ ಕಂಡು ಬಂದಿದೆ.

ಮುಖ್ಯಾಂಶಗಳು
- ದೆಹಲಿಯಿಂದ ದೂರದಲ್ಲಿರುವ ಮತ್ತ ಗಡಿಗಳನ್ನು ಹಂಚಿಕೊಂಡಿರುವ ಇತರೆ ರಾಜ್ಯಗಳಲ್ಲೂ ಸಹ ರೈತ ಹೋರಾಟವನ್ನು ಬೆಂಬಲಿಸಿ ರ್ಯಾಲಿ-ಜಾಥ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ನಡೆಯುತ್ತಿವೆ.
- ನವೆಂಬರ್ 27 ರಂದು ಸಿಂಘುವಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ನಡೆಯಲಿದೆ. ಸಭೆಯಲ್ಲಿ ರೈತ ಸಂಘಗಳು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಿವೆ.
- ನವೆಂಬರ್ 28 ರಂದು ಮುಂಬೈನ ಆಜಾದ್ ಮೈದಾನದಲ್ಲಿ ಬೃಹತ್ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಆಯೋಜಿಸಲಾಗಿದೆ.
- ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯ ನಂತರ, ಕ್ಯಾಬಿನೆಟ್ ಬುಧವಾರ ಅದರ ರದ್ದತಿಗೆ ಅನುಮೋದನೆ ನೀಡಿತು ಮತ್ತು ಸಂಸತ್ತಿನಲ್ಲಿ ಔಪಚಾರಿಕತೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಲಾಗಿದೆ.
- ನವೆಂಬರ್ 26-27 2020 ರಂದು ‘ದಿಲ್ಲಿ ಚಲೋ’ ಕರೆಯೊಂದಿಗೆ ರೈತರ ಚಳುವಳಿ ಪ್ರಾರಂಭವಾಗಿತ್ತು.

