ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು; ಐವರ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ “ಅಂಗಡಿ ಕಳ್ಳತನ” ಮಾಡಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ಅಪ್ತಾಪ್ತೆ ಸೇರಿದಂತೆ ನಾಲ್ವರು ಮಹಿಳೆಯರನ್ನು ಎಳೆದಾಡಿ, ಮಾರುಕಟ್ಟೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ, ಮಹಿಳೆಯರು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಬಟ್ಟೆಯ ತುಂಡನ್ನು ನೀಡುವಂತೆ ಸುತ್ತಲೂ ನೆರೆದಿದ್ದ ಜನರನ್ನು ಮನವಿ ಮಾಡುತ್ತಿರುವುದು ಕಂಡುಬಂದಿದೆ. ಆದರೆ, ಅವರನ್ನು ದೊಣ್ಣೆಗಳಿಂದ ಥಳಿಸಲಾಗಿದೆ.

ಮಹಿಳೆಯರು ತಮ್ಮನ್ನು ಹೋಗಲು ಬಿಡುವಂತೆ ಜನರಲ್ಲಿ ಅಳುತ್ತಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಕಾಲ ಅವರನ್ನು ಮಾರುಕಟ್ಟೆ ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ.

ಘಟನೆಯ ಒಂದೆರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪಾಕಿಸ್ತಾನದ ಪಂಜಾಬ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

“ಈ ವಿಕೃತ ಘಟನೆಗೆ ಸಂಬಂಧಿಸಿದಂತೆ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ. ಹಲವರ ವಿರುದ್ಧ ಎಫ್ಐಆರ್ ದಾಖಲಿಸಸಿದ್ದೇವೆ” ಎಂದು ಪಂಜಾಬ್ ಪೊಲೀಸ್ ವಕ್ತಾರರು ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಲ್ಲಿ ಭಾಗಿಯಾದ ಎಲ್ಲರನ್ನು ಶಿಕ್ಷೆಗೆ ಒಳಪಡಿಸಲಾಗುವುದು. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಫೈಸಲಾಬಾದ್‌ನ ಬಾವಾ ಚಾಕ್ ಮಾರುಕಟ್ಟೆಯಲ್ಲಿ ತ್ಯಾಜ್ಯ ಸಂಗ್ರಹಿಸಲು ಹೋಗಿದ್ದೆವು ಎಂದು ಸಂತ್ರಸ್ತೆ ಹೇಳಿದ್ದಾರೆ.

“ನಾವು ಬಾಯಾರಿಕೆಯಿಂದ ಉಸ್ಮಾನ್ ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ನೀರಿನ ಬಾಟಲಿಯನ್ನು ಕೇಳಿದೆವು. ಆದರೆ ಅಂಗಡಿ ಮಾಲೀಕ ಸದ್ದಾಂ ನಾವು ಕಳ್ಳತನದ ಉದ್ದೇಶದಿಂದ ಅಂಗಡಿಗೆ ಬಂದಿದ್ದೇವೆ ಎಂದು ಆರೋಪಿಸಿದರು. ಸದ್ದಾಂ ಮತ್ತು ಇತರ ಜನರು ನಮಗೆ ಥಳಿಸಲು ಪ್ರಾರಂಭಿಸಿದರು. ನಂತರ ಅವರು ನಮ್ಮನ್ನು ವಿವಸ್ತ್ರಗೊಳಿಸಿ, ಎಳೆದೊಯ್ದು ಥಳಿಸಿದರು. ಅಲ್ಲದೆ, ಅವರು ನಮ್ಮ ವೀಡಿಯೊಗಳನ್ನು ಸಹ ಮಾಡಿದ್ದಾರೆ… ಈ ದುಷ್ಕೃತ್ಯವನ್ನು ತಡೆಯಲು ಅಲ್ಲಿ ನೆರೆದಿದ್ದ ಯಾರೂ ಪ್ರಯತ್ನಿಸಲಿಲ್ಲ” ಎಂದು ದೂರಿನಲ್ಲಿ ಸಂತ್ರಸ್ತೆಯರು ತಿಳಿಸಿದ್ದಾರೆ.

ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ಸದ್ದಾಂ ಸೇರಿದಂತೆ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಬರ್ಬರ ಕೊಲೆ: ಅಪರಾಧಿಗಳಿಗೆ ಕೆಮಿಕಲ್‌ ಕ್ಯಾಸ್ಟ್ರೇಶನ್‌ ಶಿಕ್ಷೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights