ಗೋವಾ ಚುನಾವಣೆ: ವಿಪಕ್ಷಗಳ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನ; ಇಲ್ಲವಾದರೆ ಬಿಜೆಪಿಗೆ ಮತ್ತೆ ಅಧಿಕಾರ!

2022ರ ಆರಂಭದಲ್ಲಿ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಅಲ್ಲಿನ ಆಡಳಿತಾರೂಢ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಇದೇ ವೇಳೆ, ವಿರೋಧ ಪಕ್ಷಗಳ ಮೈತ್ರಿಗೆ ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಇದು ಸವಾಲಿನ ಕೆಲಸವಾಗಿದೆ.

2017ರಲ್ಲಿ ಇತರೆ ಪಕ್ಷಗಳ ಶಾಸಕರನ್ನು ಎಳೆತಂದು ಸರ್ಕಾರ ರಚಿಸಿದ್ದ ಬಿಜೆಪಿ, ಕಳೆದ ಮೂರು ವರ್ಷಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದೀಗ ಮುಂದಿನ ಚುನಾವಣೆಯಲ್ಲಿಯೂ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಇದೇ ವೇಳೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ವಿರೋಧ ಪಕ್ಷವಾದ ಕಾಂಗ್ರೆಸ್ ಗೋವಾದಲ್ಲಿ ಹೀನಾಯ ಸ್ಥಿತಿಯಲ್ಲಿದೆ.

2019 ರಲ್ಲಿ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ವಲಸೆ ಹೋದಾಗಿನಿಂದ, ಪಕ್ಷವು ತನ್ನ ಪಡೆಗಳನ್ನು ಗಟ್ಟಿಗೊಳಿಸಲು ಹೆಣಗಾಡುತ್ತಿದೆ. ಎಲ್ಲಾ ಪ್ರಾದೇಶಿಕ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷವು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ತಿಳಿಸಿದ್ದಾರೆ.

40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಮೂವರು ಶಾಸಕರನ್ನು ಹೊಂದಿರುವ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಇದೀಗ, ಇತರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯೊಂದಿಗೆ ಕೈಜೋಡಿಸಲು ಉತ್ಸುಕವಾಗಿದೆ. ಶನಿವಾರ ಪಕ್ಷದ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ಬಂದಿದ್ದ ಕಾಮತ್ ಅವರು, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ಹಾಲಿ ಶಾಸಕರಿಗೆ ಕೋಕ್‌ ಕೊಡುತ್ತಿರುವ ಬಿಜೆಪಿ; ಹೊಸ ಅಭ್ಯರ್ಥಿಗಳ ಹುಡುಕಾಟ!

ಗೋವಾದ ಹಿರಿಯ ಪತ್ರಕರ್ತ ಕಿಶೋರ್ ನಾಯಕ್ ಗಾಂವ್ಕರ್ ಪ್ರಕಾರ, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷವು ಟಿಎಂಸಿ, ಎಎಪಿ, ಜಿಎಫ್‌ಪಿ, ಎಂಜಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದ ಹೊರತು ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. “ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಯಾವುದೇ ಸಂಭಾವ್ಯ ನಾಯಕರೂ ಇಲ್ಲ. ಅಥವಾ ಗೋವಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ಅವರು ಹೇಳುತ್ತಾರೆ.

ಇನ್ನೂ ಗೊಂದಲದ ಗೂಡಾಗಿರುವ ಹಾಗೂ ಮನೆಯನ್ನು ಸುಸ್ಥಿತಿಗೆ ತರಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಪ್ರಭಲವಾಗಿ ಕಟ್ಟುವ ಸಾಮರ್ಥ್ಯ ಹೊಂದಿರುವ ಏಕೈಕ ನಾಯಕ ಮಾಜಿ ಸಿಎಂ ಪ್ರತಾಪಸಿಂಗ್ ರಾಣೆ ಎಂದು ಗಾಂವ್ಕರ್ ಹೇಳುತ್ತಾರೆ. ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿಯ ರಾಷ್ಟ್ರೀಯ ನಾಯಕರು ಚುನಾವಣೆಗೆ ಮುಂಚಿತವಾಗಿ ಮಹಾಮೈತ್ರಿಕೂಟವನ್ನು ರೂಪಿಸಲು ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರ ಒಂದು ವರ್ಗ ಭಾವಿಸುತ್ತದೆ.

ಮೂಲಗಳ ಪ್ರಕಾರ, ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಖಂಡಿತವಾಗಿಯೂ ಚುನಾವಣೆಯಲ್ಲಿ ಗೆಲ್ಲುತ್ತದೆ. ಏಕೆಂದರೆ ಟಿಎಂಸಿ ಮತ್ತು ಎಎಪಿ ಎರಡೂ 40 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಹಂಚಿಕೆಯನ್ನು ಒಡೆಯುತ್ತವೆ. ಬಿಜೆಪಿಯು ಬಹುತೇಕ ಕ್ಷೇತ್ರಗಳಲ್ಲಿ “ಗೆಲ್ಲಬಲ್ಲ” ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಅಲ್ಲದೆ, ಈ ಬಾರಿ ಅನೇಕ ಹಾಲಿ ಶಾಸಕರನ್ನು ಕೈಬಿಡಬಹುದು” ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ಎಎಪಿ ಗೆದ್ದರೆ ಅಯೋಧ್ಯೆ ಮತ್ತು ಇತರ ಕ್ಷೇತ್ರಗಳಿಗೆ ಉಚಿತ ಯಾತ್ರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights