ಹೆಚ್ಚು ಬಿಜೆಪಿ ಶಾಸಕ, ಸಂಸದರಿದ್ದರೂ ಮೈಸೂರು-ಬೆಳಗಾವಿಯಲ್ಲಿ ಬಿಜೆಪಿ ಸೋಲು; ಪರಾಮರ್ಶೆಗೆ ಮುಂದಾದ ಬಿಎಸ್ವೈ
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಬೆಳಗಾವಿ, ಮೈಸೂರಿನಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ನಿರೀಕ್ಷೆ ಇತ್ತಾದರೂ, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ, ಈ ಕ್ಷೇತ್ರಗಳ ಸೋಲಿಗೆ ಕಾರಣವೇನು ಎಂದು ಪರಾಮರ್ಶಿಸಲು ಬಿಜೆಪಿ ಮುಂದಾಗಿದೆ.
ಬೆಳಗಾವಿ ಮತ್ತು ಮೈಸೂರಿನಲ್ಲಿ ಬಿಜೆಪಿಯ ಸಂಸದರೇ ಇದ್ದಾರೆ. ಅಲ್ಲದೆ, ಈ ಕ್ಷೇತ್ರಗಳಲ್ಲಿ ಹೆಚ್ಚಿನವರು ಬಿಜೆಪಿ ಶಾಸಕರೇ ಆಗಿದ್ದಾರೆ. ಆದರೂ, ಇಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ.
ಸೋತಿರುವ ಕ್ಷೇತ್ರಗಳ ಸಂಪೂರ್ಣ ವರದಿ ತರಿಸಿ ಪರಿಶೀಲನೆ ನಡೆಸಲಾಗುವುದು. ನಂತರ, ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ಸೋಲಿನ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಹೆಚ್ಚು ಶಾಸಕರು, ಸಂಸದರು ಇದ್ದರೂ ಗೆಲುವು ಸಾಧ್ಯವಾಗಿಲ್ಲ. ಈ ಬಗ್ಗೆ ಸಿಎಂ ಕೂಡ ಮಾತನಾಡಿದ್ದಾರೆ. ಎಲ್ಲಿ ಏನಾಗಿದೆ? ಯಾರೆಲ್ಲ ಕೆಲಸ ಮಾಡಿಲ್ಲ ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ. ನಂತರ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನ ವಿಶೇಷ ಚರ್ಚೆ ನಡೆಯಲಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಅವರಿಗೆ ಮನವಿ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಬಿಎಸ್ವೈ ಹೇಳಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಬಹುಮತ ಪಡೆದ ಬಿಜೆಪಿ; ಉಳಿಯುತ್ತಾ ಜೆಡಿಎಸ್ಗೆ ಸಭಾಪತಿ ಸ್ಥಾನ?

