Fact check: ‘RSS ದಾಳಿಯಿಂದ ಗ್ರಾಮ ತೊರೆದ ಮುಸ್ಲಿಮರು’ ಎಂಬ ವಿಡಿಯೊದ ವಾಸ್ತವವೇನು?

ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಎರಡು ದಿನಗಳಿಂದ ಸಾಕಷ್ಟು ವೈರಲ್ ಆಗುತ್ತಿದೆ. “ನಾಸಿಕ್ ನಲ್ಲಿ ಮುಸ್ಲಿಮರನ್ನು ಗ್ರಾಮದಿಂದ ಹೊರಹಾಕುತ್ತಿರುವ ಆರ್‌ಎಸ್‌ಎಸ್ ಭಯೋತ್ಪಾದಕರು. ನಿಮ್ಮ ಮನೆ ಬಾಗಿಲಿಗೂ ಆರ್‌ಎಸ್‌ಎಸ್‌ ಮತ್ತು ಸಂಘಪರಿವಾರದ ಗೂಂಡಾಗಳು ನುಗ್ಗುವ ಮುನ್ನ ಪ್ರತಿರೋಧಕ್ಕೆ ಸಿದ್ಧರಾಗಿ” ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೊ

ವೈರಲ್ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಮಾತನಾಡುತ್ತ  ಹೀಗೆ ಹೇಳುತ್ತಾರೆ: “ನಾನು ನಾಸಿರ್‌ ಶೇಕ್ , ಇಲ್ಲಿ ನೋಡಿ ಇಡೀ ಫಿರಾನಾ ಗ್ರಾಮವೇ ಭಯದಿಂದ ವಲಸೆ ಹೋಗ್ತಿದೆ. ಗ್ರಾಮದಲ್ಲಿರುವ ಒಂದು ದರ್ಗದ ಬಗ್ಗೆ ಮಾತಾಡ್ತಿದ್ದೀನಿ, ಇಲ್ಲಿ ಸುಮಾರು 300 ರಿಂದ 400 ಜನ RSS ಕಾರ್ಯಕರ್ತರು ಫಿರಾನ ಗ್ರಾಮದ ದರ್ಗ ವಿಚಾರವಾಗಿ ಅಲ್ಲಿಯ ಮುಸಲ್ಮಾನರ ಮೇಲೆ ದಾಳಿ ನಡೆಸಲು ಮುಂದಾದಾಗ ಗ್ರಾಮದ ಮುಸ್ಲಿಮರು ಹೆದರಿ ಊರನ್ನು ತೊರೆದು ಹೊರಹೋಗುತ್ತಿದ್ದಾರೆ. ನಾನು ಇಡೀ ಗುಜರಾತಿನ ನಾಗರಿಕರಿಗೆ ಮನವಿ ಮಾಡುತ್ತ ನಿಮ್ಮಲ್ಲಿ ಸಹಾಯ ಬೇಡುತ್ತಿದ್ದೇನೆ. ದಯಮಾಡಿ ನೀವು ನಮಗೆ ಸಹಾಯ ಮಾಡಿ” ಎಂದು ಹೇಳುತ್ತ ಈ ವಿಡಿಯೊವನ್ನು ಎಲ್ಲರೂ ಶೇರ್ ಮಾಡಿ ಎಂದು ಮನವಿ ಮಾಡುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೊದ ಸ್ಕ್ರೀನ್‌ಶಾಟ್  ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್  ಆದ ವಿಡಿಯೊ ಕೆಲವು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಕೀವರ್ಡ್ ಗಳನ್ನು ಬಳಸಿಕೊಂಡು ಮತ್ತಷ್ಟು ಶೋಧ ನಡೆಸಿದಾಗ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರವಾಗಿರುವ ವರದಿಗಳು ಲಭ್ಯವಾಗಿವೆ.

ಈ ಹೇಳಿಕೆಯಿರುವ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದನ್ನು ಮುಸ್ಲಿಂ ಸಮುದಾಯದ ಯುವಕರು ತಮ್ಮ ಆಪ್ತ ವಲಯದ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ವಿಡಿಯೊ ಮತ್ತು ಹೇಳಿಕೆಯ ಸತ್ಯ ಪರಿಶೀಲಿಸುವಂತೆ ‘ಏನ್ ಸುದ್ದಿ.ಕಾಂ’ ಕಚೇರಿಗೆ ಕೋರಿಕೆಗಳು ಬಂದಿವೆ. ಹಾಗಾಗಿ ವೈರಲ್ ವಿಡಿಯೊದ ಸತ್ಯಾಸತ್ಯತೆಗಳನ್ನು ಫ್ಯಾಕ್ಟ್‌ಚೆಕ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದ ವರದಿಯನ್ನು Indian express ಮತ್ತು  Times of Indiaನಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್:

ವರದಿಗಳ ಪ್ರಕಾರ ಘಟನೆಯು ಗುಜರಾತಿನಲ್ಲಿ ನಡೆದಿದೆ. ಅಹಮದಾಬಾದ್‌ನಿಂದ 20 ಕಿಮೀ ದೂರದಲ್ಲಿರುವ ಪಿರಾನ್ಹಾ ಎಂಬ ಗ್ರಾಮದಲ್ಲಿ ಒಂದು ದರ್ಗಾ, ಮಸೀದಿ ಮತ್ತು  ಸ್ಮಶಾನ ಇದ್ದು, ಪೀರ್ ಇಮಾಮ್ ಶಾ ದರ್ಗಾ ಮತ್ತು ಮಸೀದಿ ನಡುವೆ ಗೋಡೆ ನಿರ್ಮಾಣ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಗೋಡೆ ನಿರ್ಮಾಣ ಮಾಡಬಾರದು ಎಂದು ಪಿರಾನ್ಹಾ ಗ್ರಾಮದ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ. 13 ವರ್ಷದ ಹಳೆಯದಾದ ಬೇಲಿ ತೆರವು ಮಾಡಿ ಅದೇ ಜಾಗದಲ್ಲಿ ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಲು ತಯಾರಿ ನಡೆಸಲಾಗಿತ್ತು. ಗೋಡೆ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು.

ಗೋಡೆ ನಿರ್ಮಾಣದ ವಿರೋದಕ್ಕೆ ಕಾರಣ ಏನು?

ಒಂದೇ ಜಾಗಕ್ಕೆ ಹೊಂದಿಕೊಂಡಂತೆ ದರ್ಗಾ, ಮಸೀದಿ ಮತ್ತು ಸ್ಮಶಾನವಿದ್ದು, ದರ್ಗಾದಿಂದ ಮಸೀದಿ ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗೋಡೆಯ ನಿರ್ಮಾಣದಿಂದ ಆವರಣದಲ್ಲಿರುವ ಮಸೀದಿ ಮತ್ತು ಸ್ಮಶಾನದಿಂದ ದರ್ಗಾಕ್ಕೆ ಇರುವ ಪ್ರವೇಶ ದ್ವಾರವನ್ನು ಮುಚ್ಚಿದಂತಾಗುತ್ತದೆ. “ದೇಗುಲದ ಸ್ವರೂಪ ಕೂಡ ಬದಲಾಗುತ್ತದೆ” ಎಂದು ಆರೋಪಿಸಿ ಪಿರಾನಾ ಗ್ರಾಮದ ನಿವಾಸಿಗಳು, ಹೆಚ್ಚಾಗಿ ಸೈಯದ್ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಸ್ಲಾಲಿ ಪೊಲೀಸರು 64 ಮಹಿಳೆಯರು ಸೇರಿದಂತೆ ಒಟ್ಟು 133 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಗೋಡೆ ನಿರ್ಮಾಣ ವಿರೋಧಿಸಿ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ನಾಸಿರ್ ಶೇಕ್ ಎಂಬ ವ್ಯಕ್ತಿಯು ಮೆರವಣಿಗೆಯ ದೃಶ್ಯಗಳನ್ನು ಸೆರೆಹಿಡಿದು ಪ್ರತಿಭಟನಾ ಮರೆವಣಿಗೆಯನ್ನು ಸಾಮೂಹಿಕ ವಲಸೆ ಎಂದು ಹೇಳಿ ವಿಡಿಯೊವನ್ನು ಮಾಡಿದ್ದಾರೆ. ಆ ವಿಡಿಯೊದಲ್ಲಿ, “RSS ಕಾರ್ಯಕರ್ತರಿಂದ ಮುಸ್ಲಿಂ ಸಮುದಾಯದವರು ಗ್ರಾಮ ತೊರೆದು ವಲಸೆ ಹೋಗುತ್ತಿದ್ದಾರೆ” ಎಂದು ತಪ್ಪು ಹೇಳಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಹಮದಾಬಾದ್‌ನ ಪಿರಾನಾ ಗ್ರಾಮದಲ್ಲಿ ಸಾಮೂಹಿಕ ವಲಸೆಯ ಕುರಿತು ನಕಲಿ ಟ್ವೀಟ್ ಆತಂಕ ಮೂಡಿಸಿತ್ತು. ಅಲ್ಲಿ ಮಾತನಾಡಿರುವ ವ್ಯಕ್ತಿಯು ‘ಹಿಂದೂ ಭಯೋತ್ಪಾದಕರಿಂದಾಗಿ ಮುಸ್ಲಿಮರು ವಲಸೆ ಹೋಗುತ್ತಿದ್ದಾರೆ’ ಎಂದು ಹೇಳಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು.

ನಾಸಿರ್‌ ಶೇಕ್ ನನ್ನು ಪೊಲೀಸರು ಬಂಧಿಸಿದ ನಂತರ ಕ್ಷಮೆ ಕೇಳುತ್ತಿರುವ ವೀಡಿಯೋವನ್ನು ಕೆಳಗೆ ನೋಡಬಹುದು.

ವೈರಲ್ ವಿಡಿಯೊದಲ್ಲಿ ನಾಸಿರ್ ಶೇಕ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, “ಕೋಮು ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ” ಎಂದು ಪರಿಗಣಿಸಿ ಆತನನ್ನು ಬಂಧಿಸಿದ್ದರು. ನಂತರ ಆ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.  ಕ್ಷಮೆಯಾಚಿಸುವ ವೀಡಿಯೊವನ್ನು ಕೆಲವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಮಾಮ್ ಶಾಯಿ ಸದಾತ್ ಕಮಿಟಿಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಯದ್ ಟ್ರಸ್ಟ್ ಮತ್ತು ಸತ್ಪಂಥಿ ಟ್ರಸ್ಟ್ ನಡುವೆ ವ್ಯಾಜ್ಯ ಇದ್ದು ಇದನ್ನು ಹಿಂದೂ ಮುಸ್ಲಿಂ ಘರ್ಷಣೆ ಎಂದು ಬಿಂಬಿಸುವುದು ಬೇಡ. ಪಿರಾನ ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಇದ್ದೇವೆ. ಸುಳ್ಳು ಸುದ್ದಿಗಳನ್ನು ಹರಡಬೇಡಿ” ಎಂದು ತಿಳಿಸಿದೆ.

ಒಟ್ಟಾರೆ ಹೇಳುವುದಾದರೆ ವೈರಲ್ ವಿಡಿಯೊದಲ್ಲಿ ಹೇಳಲಾಗಿರುವ RSS ಮತ್ತು ಸಂಘಪರಿವಾದ ಭಯೋತ್ಪಾಧಕ ಗೂಂಡಾಗಳಿಂದ ಫಿರಾನ ಗ್ರಾಮದವರನ್ನು ರಕ್ಷಿಸಿ ಎಂದು ಹೇಳಿರುವ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ. ಘಟನೆಯು ದರ್ಗಾ ಮತ್ತು ಮಸೀದಿ ನಡುವೆ ಗೋಡೆ ನಿರ್ಮಾಣವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಾಗಿದೆ. ಕೋಮು ಸಾಮರಸ್ಯಕ್ಕೆ ದಕ್ಕೆಯುಂಟಾಗಿ ಅಶಾಂತಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಾಸಿರ್ ಶೇಕ್‌‌ನನ್ನು ಬಂಧಿಸಲಾಗಿದೆ.  ನಂತರ ಆತ ಕ್ಷಮೆ ಯಾಚಿಸಿದ್ದಾನೆ. ಹಾಗಾಗಿ ವೈರಲ್ ವಿಡಿಯೊದಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆ ಸುಳ್ಳಾಗಿದೆ.


ಇದನ್ನು ಓದಿ: ಫ್ಯಾಕ್ಟ್‌ಚೆಕ್‌: ಮುಂದಿನ ತಿಂಗಳು ಹೈದ್ರಾಬಾದ್‍ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಮೋದಿ ನಿರ್ಮಿಸಿದ್ದಲ್ಲ!


 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights