ಫ್ಯಾಕ್ಟ್‌ಚೆಕ್: ಹಿಜಾಬ್ ಧರಿಸಿದ ಕಾರಣಕ್ಕೆ ಹಿಂದೂ ಕಾರ್ಯಕರ್ತರು ಮಹಿಳೆಯನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದು ನಿಜವೆ?
ಹಿಜಾಬ್ ಧರಿಸಿದ್ದಕ್ಕಾಗಿ ಹಿಂದೂ ಪರ ಕಾರ್ಯಕರ್ತರು ಮುಸ್ಲಿಂ ಮಹಿಳೆಯನ್ನು ಬಸ್ಸಿನಿಂದ ಹೊರಕ್ಕೆ ಎಸೆದಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಯನ್ನು ಚಲಿಸುತ್ತಿದ್ದ ಬಸ್ಸಿನಿಂದ ಹೊರಕ್ಕೆ ಎಳೆದು ದಬ್ಬುವ ವಿಡಿಯೊ ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ ನಡೆದಿರುವ ಘಟನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೊ ರೀತಿಯ ದೃಶ್ಯಗಳಿರುವ ವೀಡಿಯೊವನ್ನು 08 ಮಾರ್ಚ್ 2021 ರಂದು ‘ಢಾಕಾ ಪೋಸ್ಟ್’ ಸುದ್ದಿ ವಾಹಿನಿ ಪ್ರಕಟಿಸಿರುವುದು ಕಂಡುಬಂದಿದೆ.
ಬಸ್ ದರವನ್ನು ಪಾವತಿ ಮಾಡದ ಕಾರಣ ಮಾತನಾಡಲು ಬಾರದ(ಮೂಕ) ಮಹಿಳೆಯನ್ನು ಬಸ್‌ನಿಂದ ಹೊರಹಾಕಲಾಗಿದೆ ಎಂದು ವರದಿ ಮಾಡಿದೆ. ‘ಢಾಕಾ ಪೋಸ್ಟ್’ ವೀಡಿಯೊದಲ್ಲಿ ಬಾಂಗ್ಲಾದೇಶದ ಕೆರಾನಿಗಂಜ್‌ನ ಢಾಕಾ-ನವಾಬ್‌ಗಂಜ್ ರಸ್ತೆಯಲ್ಲಿರುವ ರೋಹಿತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇತರ ಕೆಲವು ಬಾಂಗ್ಲಾದೇಶ ಸುದ್ದಿ ವಾಹಿನಿಗಳು ಸಹ ಇದೇ ವಿವರಣೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಂಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಚಲಿಸುತ್ತಿದ್ದ ಬಸ್‌ನಿಂದ ಮಹಿಳೆಯನ್ನುಹೊರಗೆ ತಳ್ಳಿದ್ದಕ್ಕಾಗಿ ‘ಎನ್ ಮಲಿಕ್’ ಸಾರಿಗೆ ಬಸ್‌ನ ಚಾಲಕ ಮತ್ತು ಸಹಾಯಕನನ್ನು ಬಾಂಗ್ಲಾದೇಶದ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ತಂಡವು ತಕ್ಷಣವೇ ಬಂಧಿಸಿತು. ಮಹಿಳೆಯನ್ನು ಹೊರಗೆ ತಳ್ಳಿದ ಬಸ್ ಅನ್ನು RAB ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯ ವಿವರಗಳನ್ನು ವರದಿ ಮಾಡುತ್ತಾ, ಹಲವಾರು ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್‌ಗಳು ಮಾರ್ಚ್ 2021 ರಲ್ಲಿ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಆಧಾರಗಳಿಂದಾಗಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಬಾಂಗ್ಲಾದೇಶದ್ದು ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿಲ್ಲ ಎಂದು ಖಚಿತವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಂಗ್ಲಾದೇಶದ ಕೆರಾನಿಗಂಜ್‌ನ ಢಾಕಾ-ನವಾಬ್‌ಗಂಜ್ ರಸ್ತೆಯಲ್ಲಿರುವ ರೋಹಿತ್‌ಪುರ ಪ್ರದೇಶದಲ್ಲಿ ಮಾತು ಬಾರದ ಮಹಿಳೆಯು ಪ್ರಯಾಣದ ಹಣ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಚಲಿಸುತ್ತಿದ್ದ ಬಸ್ಸಿನಿಂದ ಹೊರಕ್ಕೆಳೆದು ತಳ್ಳಿ ಅಮಾನವೀಯವಾಗಿ ವರ್ತಿಸಿದ ಘಟನೆಯನ್ನು ಕರ್ನಾಟಕದಲ್ಲಿ ಹಿಜಾಬ್ ಧರಿಸಿದ್ದ ಕಾರಣಕ್ಕೆ ಹಿಂದೂ ಕಾರ್ಯಕರ್ತರು ಮುಸ್ಲಿಂ ಮಹಿಳೆಯನ್ನು ಬಸ್‌ನಿಂದ ತಳ್ಳುತ್ತಿರುವಂತೆ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: Fact check: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಯ ವಿಡಿಯೋವನ್ನು ಸುಳ್ಳೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ ಬಲಪಂಥೀಯ ಪ್ರತಿಪಾದಕರು!

