ಫ್ಯಾಕ್ಟ್‌ಚೆಕ್: ಉತ್ತರಪ್ರದೇಶದ 7ನೇ ಹಂತದ ಚುನಾವಣೆ ವೇಳೆ BJP ಪಕ್ಷದಿಂದ ನಕಲಿ ಮತದಾನ ನಡೆದಿರುವುದು ನಿಜವಲ್ಲ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನ ಮಾರ್ಚ್ 7 ರಂದು(ಇಂದು) ನಡೆಯುತ್ತಿದೆ.  ಮಾರ್ಚ್ 10 ರಂದು  ಫಲಿತಾಂಶ ಹೊರಬೀಳಲಿದ್ದು ಇಡೀ ದೇಶದ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಇಂದು 9 ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳ ಮತದಾರರು ತಮ್ಮ ಜನಾದೇಶವನ್ನು ಚಲಾಯಿಸಲು ಸಜ್ಜಾಗುತ್ತಿರುವಾಗ, ನಕಲಿ ಮತದಾನ ನಡೆದಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ವೀರೇಂದ್ರ ಕುಮಾರ್ ಎಂಬ ಯುವಕ ಬಿಜೆಪಿ ಕಾರ್ಯಕರ್ತರು ಮತದಾರರ ಬೆರಳಿಗೆ ಶಾಯಿ ಹಾಕುತ್ತಿದ್ದಾರೆ ಹಾಗೂ ಜನರಿಗೆ ಹಣ ನೀಡಿ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಇದರಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಕೆಲ ಹೆಸರನ್ನು ಹೇಳುವುದನ್ನು ನೋಡಬಹುದು.

ಆ ವೀಡಿಯೊದ ನಂತರದ ಭಾಗದಲ್ಲಿ, ಮಧ್ಯವಯಸ್ಕ ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿ ಮಹೇಂದ್ರ ಪಾಂಡೆ ಮತ್ತು ಅವರ ಬೆಂಬಲಿಗರು ಹಣದ ಆಮಿಷ ಒಡ್ಡಿ ಹಳ್ಳಿಗಳಲ್ಲಿ ಮತಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುವುದನ್ನು ಕೇಳಬಹುದು.  “ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ” ಎಂದು ಭಾಷಾಂತರಿಸಿದ ವ್ಯಂಗ್ಯದ ಹಿಂದಿ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಯುಪಿ ಚುನಾವಣೆಯ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಈ ವೀಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ.

ಒಂದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೊಗಳ ಸ್ಕ್ರೀನ್‌ಶಾಟ್ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಹಲವು ವಿಡಿಯೊಗಳು ಲಭ್ಯವಾಗಿದ್ದು, ಈ ವಿಡಿಯೊದಲ್ಲಿರುವ ಘಟನೆ ಸುಮಾರು ಮೂರು ವರ್ಷಗಳ ಹಿಂದೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಮೇ 19, 2019 ರಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಿ ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ವೀಡಿಯೊ ವರದಿ ಲಭ್ಯವಾಗಿದ್ದು. ವರದಿ ಪ್ರಕಾರ, “ತಾರಾ ಜೀವನ್‌ಪುರ ಗ್ರಾಮದ ನಿವಾಸಿಗಳನ್ನು ಬಿಜೆಪಿಯವರು ಬಲವಂತವಾಗಿ ಕೈ ಬೆರಳುಗಳಿಗೆ ಶಾಯಿಯನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.” ಈ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.

ನ್ಯೂಸ್ 18 ರ ಲೋಗೋ ವೀಡಿಯೊದಲ್ಲಿ ಕಾಣಬಹುದು. ಅದರ ಆಧಾರದಲ್ಲಿ ಮತ್ತಷ್ಟು ಹುಡುಕಿದಾಗ ಮೇ 19, 2019 ರಂದು ನ್ಯೂಸ್ 18 ವೆಬ್‌ಸೈಟ್ ಪ್ರಕಟಿಸಿದ ವೀಡಿಯೊ ವರದಿಯು ಲಭ್ಯವಾಗಿವೆ. ಚಂದೌಲಿಯ ತಾರಜೀವನಪುರ ಗ್ರಾಮದ ದಲಿತ ಪ್ರಾಬಲ್ಯದ ಕೊಳೆಗೇರಿಯ ಜನರು ಬಿಜೆಪಿ ಕಾರ್ಯಕರ್ತರು ತಮಗೆ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತದಾನ ಮಾಡದಂತೆ ಮತದಾರರಿಗೆ ತಲಾ 500 ರೂ. ನೀಡುವುದರ ಜೊತೆಗೆ ಮತದಾರರ ಬೆರಳಿಗೆ ಶಾಹಿ ಹಾಕಲಾಗಿದೆ ಎಂದು ಆರೋಪಿಸಿದಾರೆ. ಹಾಗಾಗಿ ಈ ವಿಡಿಯೋ ಹಳೆಯದು ಎಂದು ಸಾಬೀತಾಗಿದೆ.

ಅಲ್ಲದೆ ಉತ್ತರ ಪ್ರದೇಶ ಪೊಲೀಸರ ಅಧಿಕೃತ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಮಾರ್ಚ್ 5 ರಂದು ನಕಲಿ ಮತದಾನದ ಸುದ್ದಿಯನ್ನು ತಳ್ಳಿಹಾಕಿದೆ.

ಆದ್ದರಿಂದ, ಈಗಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹಳೆಯ ವೀಡಿಯೊವನ್ನು ಈಗ ವೈರಲ್ ಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿರುವ ವಿಡಿಯೊಗೂ 7ನೇ ಹಂತದ ಈಗ ನಡೆಯುತ್ತಿರುವ ಚುನಾವಣೆಗೂ ಯಾವ ಸಂಬಂಧವೂ ಇಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಜಾಬ್ ಧರಿಸಿದ ಕಾರಣಕ್ಕೆ ಹಿಂದೂ ಕಾರ್ಯಕರ್ತರು ಮಹಿಳೆಯನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights