Fact check: ಸೊನಿಯಾ ಗಾಂಧಿಯ ಹಸ್ತಕ್ಷೇಪದಿಂದಾಗಿ ದೆಹಲಿಯಲ್ಲಿ ಹಿಂದೂಗಳು ಅವಕಾಶ ವಂಚಿತರಾಗಿದ್ದಾರೆ ಎಂಬುದು ನಿಜವಲ್ಲ
ದೆಹಲಿಯ ಸರ್ಕಾರಿ ಸಂಸ್ಥೆಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಹೆಚ್ಚಿನ ಆದ್ಯೆತೆ ನೀಡಿ ಮೀಸಲಾತಿ ನೀಡಲಾಗಿದೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸೋನಿಯಾ ಗಾಂಧಿಯವರ ಹಸ್ತಕ್ಷೇಪದಿಂದ 2008 ರಿಂದ ಸರ್ಕಾರಿ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಕಡಿಮೆ ಆದ್ಯತೆ ನೀಡಲಾಗಿದೆ ಎಂದು ಪೊಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಪರಿಶೀಲಿಸೋಣ.

ಫ್ಯಾಕ್ಟ್ಚೆಕ್:
ಕೇಂದ್ರ ಸರ್ಕಾರದ ಅಧಿಕಾರಿಗಳ ಪಟ್ಟಿಯು ಆಯಾ ಸಂಸ್ಥೆಗಳ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಉದಾಹರಣೆಗೆ, ಮೂರು ಸಂಸ್ಥೆಗಳಲ್ಲಿನ ಅಧಿಕಾರಿಗಳ ಪಟ್ಟಿಯನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಪೋಸ್ಟ್ನಲ್ಲಿ ಹೇಳಲಾದ ಸಂಖ್ಯೆಗಳೊಂದಿಗೆ ಹೋಲಿಕೆ ಮಾಡಲಾಗಿದ್ದು, ವಿವರಗಳನ್ನು ಕೆಳಗೆ ನೀಡಲಾಗಿದೆ.
ಭಾರತದ ಅಧ್ಯಕ್ಷರ (ರಾಷ್ಟ್ರಪತಿ) ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷರ ಕಾರ್ಯದರ್ಶಿಯ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು. 49 ಪೋಸ್ಟ್ಗಳಲ್ಲಿ 45 ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಮತ್ತು ಕೇವಲ 4 ಹಿಂದೂಗಳು ಎಂದು ಪೋಸ್ಟ್ನಲ್ಲಿ ಮಾಡಿದ ಹೇಳಿಕೆ ನಿಜವಲ್ಲ. ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಸುಮಾರು 36 ಅಧಿಕಾರಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹಿಂದೂ ಹೆಸರುಗಳನ್ನು ಹೊಂದಿದ್ದಾರೆ.

ಭಾರತದ ಉಪಾಧ್ಯಕ್ಷರ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಪಟ್ಟಿಯನ್ನು ಉಪಾಧ್ಯಕ್ಷರ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು. 7 ಪೋಸ್ಟ್ಗಳಲ್ಲಿ 7 ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮತ್ತು ಯಾರೂ ಹಿಂದೂಗಳಲ್ಲ ಎಂದು ಪೋಸ್ಟ್ನಲ್ಲಿ ಮಾಡಿದ ಹೇಳಿಕೆಯು ನಿಜವಲ್ಲ. ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಸುಮಾರು 52 ಅಧಿಕಾರಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹಿಂದೂ ಧರ್ಮದವರಾಗಿದ್ದಾರೆ.

ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಪಟ್ಟಿಯನ್ನು ಪ್ರಧಾನಿಯವರ ವೆಬ್ಸೈಟ್ನಲ್ಲಿ ನೋಡಬಹುದು. 35 ಪೋಸ್ಟ್ಗಳಲ್ಲಿ 33 ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಮತ್ತು ಕೇವಲ 2 ಹಿಂದೂಗಳು ಎಂದು ಪೋಸ್ಟ್ನಲ್ಲಿ ಮಾಡಿದ ಹೇಳಿಕೆ ನಿಜವಲ್ಲ. ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಸುಮಾರು 49 ಅಧಿಕಾರಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದಾರೆ.

ಭಾರತದ ಸಂವಿಧಾನದ ಪ್ರಕಾರ, ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲಾಗುವುದಿಲ್ಲ. ಯಾವ ಕಾರಣಕ್ಕೂ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂವಿಧಾನ ವಿರೋಧಿಯಾದ ಕ್ರಮವಾಗಿರುತ್ತದೆ. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ನಿರ್ದಿಷ್ಟವಾಗಿ ಮೀಸಲಾತಿ ಒದಗಿಸುವ ಯಾವುದೇ ನಿಯಮವಿಲ್ಲ. ಸರ್ಕಾರ ಕೂಡ ಧರ್ಮದ ಆಧಾರದ ಮೇಲೆ ಅಂತಹ ಪಟ್ಟಿಯನ್ನು ನಿರ್ವಹಿಸುವುದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕೇವಲ ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿ ನೀಡಲಾಗುವುದಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದ್ದು, ಈ ಮೂಲಕ ಜನರ ಮನಸ್ಸುಗಳನ್ನು ಕದಡುವ ಕೆಲಸವನ್ನು ಕೆಲ ಸಮಾಜಘಾತುಕ ಶಕ್ತಿಗಳು ಮಾಡುತ್ತಿವೆ. ಹಾಗಾಗಿ ಜನರು ಇವುಗಳನ್ನು ನಂಬುವ ಮೊದಲು ಎಚ್ಚರಿಕೆಯಿಂದ ಇರಬೇಕು.
ಇದನ್ನು ಓದಿರಿ: Fact check: ಬಜರಂಗದಳದ ಹರ್ಷ ಹತ್ಯೆಯ ಆರೋಪಿಗಳನ್ನು ನನ್ನ ಬ್ರದರ್ಸ್ ಎಂದು ಡಿ.ಕೆ ಶಿವಕುಮಾರ್ ಹೇಳಿಲ್ಲ

