ಮಧ್ಯಪ್ರದೇಶ: 1 ಕೋಟಿ ರೂ.ಗೂ ಅಧಿಕ ಮೌಲ್ಯದ 139 ವಜ್ರಗಳು ಹರಾಜು!
ಸೆಪ್ಟೆಂಬರ್ 21 ರಿಂದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಅಂದಾಜು 1.06 ಕೋಟಿ ರೂ. ಮೌಲ್ಯದ ಒಟ್ಟು 139 ಕಚ್ಚಾ ವಜ್ರಗಳನ್ನು ಹರಾಜು ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಒಟ್ಟಾರೆಯಾಗಿ 156.46 ಕ್ಯಾರೆಟ್ ತೂಕದ ವಜ್ರಗಳನ್ನು ಜಿಲ್ಲೆಯ ಗಣಿಗಳಿಂದ ತೆಗೆಯಲಾಗಿದೆ ಎಂದು ಪನ್ನಾದ ಅಧಿಕಾರಿ ರವಿ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇವುಗಳಲ್ಲಿ ಪ್ರಮುಖವಾಗಿ ಒಂದು ಬೆಲೆಬಾಳುವ ಕಲ್ಲಿದ್ದು, ಅದರಲ್ಲಿ 14.09 ಕ್ಯಾರೆಟ್ ವಜ್ರವೂ ಸೇರಿದೆ. ಇದು ಫೆಬ್ರವರಿಯಲ್ಲಿ ಕಾರ್ಮಿಕರಿಗೆ ಸಿಕ್ಕಿದ್ದು, ಆ ವೇಳೆ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದೆ. ಅದು ಸುಮಾರು 70 ಲಕ್ಷ ರೂ.ಗಳಿಗೆ ಮಾರಾಟವಾಗಬಹುದು. ಇದು ಈ ಬಾರಿ ಹರಾಜಿನಲ್ಲಿ ಇರಿಸಲಾಗಿರುವ ಅತಿದೊಡ್ಡ ರತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ದೇಶದ ಇತರ ಭಾಗಗಳ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಪಟೇಲ್ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಚ್ಚಾ ವಜ್ರಗಳ ಹರಾಜಿನಿಂದ ಬರುವ ಆದಾಯವನ್ನು ಸರ್ಕಾರಿ ರಾಯಲ್ಟಿ ಮತ್ತು ತೆರಿಗೆಗಳ ಕಡಿತದ ನಂತರ ಆಯಾ ಕಾರ್ಮಿಕರಿಗೆ ನೀಡಲಾಗುವುದು.
ಫೆಬ್ರವರಿಯಲ್ಲಿ, ಒಬ್ಬ ಕಾರ್ಮಿಕರೊಬ್ಬರು ಪನ್ನಾ ಜಿಲ್ಲೆಯ ಕೃಷ್ಣ ಕಲ್ಯಾಣಪುರ ಗ್ರಾಮದ ಬಳಿ ಗುತ್ತಿಗೆಗೆ ತೆಗೆದುಕೊಂಡಿದ್ದ ಗಣಿಯಲ್ಲಿ ಅವರಿಗೆ 14.09 ಕ್ಯಾರೆಟ್ ವಜ್ರ ದೊರೆತಿದೆ.
ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ಗಳಷ್ಟು ವಜ್ರಗಳಿವೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ದುರಂತ: ಪೈಲಟ್ ನಿರ್ಲಕ್ಷ್ಯವೇ ಕಾರಣ ಎಂದ ಎಎಐಬಿ ವರದಿ!