ಫ್ಯಾಕ್ಟ್‌ಚೆಕ್ : ಪಾಕ್‌ನಲ್ಲಿ ಪ್ರವಾಹ ಎಂದು, ಜಪಾನ್‌ನ ಹಳೆಯ ವಿಡಿಯೊ ಹಂಚಿಕೆ

ಪಾಕಿಸ್ತಾನದ ಕರಾಚಿಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿಯ ನಿರ್ಮಾಣವಾಗಿದೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ, ಭಯಾನಕ ಪ್ರವಾಹದಿಂದ  ಕಾರು ಹಾಗೂ ಮತ್ತಿತರ ವಾಹನಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಾಣಬಹುದು. ಇದು ಕರಾಚಿ ನಗರದಲ್ಲಿ ಪ್ರವಾಹದ ದೃಶ್ಯ ಎಂದು ಪ್ರತಿಪಾದಿಸಲಾಗಿದೆ.

ವೈರಲ್ ವೀಡಿಯೊದಲ್ಲಿ, ಪಾಕಿಸ್ತಾನದ ಕರಾಚಿ ನಗರದಲ್ಲಿ ಪ್ರವಾಹದ ಇತ್ತೀಚಿನ ದೃಶ್ಯ ಎಂದು ಬಳಕೆದಾರರು ಬರೆದಿದ್ದಾರೆ. ಹಾಗಿದ್ದರೆ ಈ ದೃಶ್ಯಗಳು ನಿಜವಾಗಿಯೂ ಪಾಕಿಸ್ತಾನದಿಂದ ಬಂದಿವೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೊದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ  FNN311 YouTube ಚಾನಲ್‌ನಲ್ಲಿ ವೈರಲ್ ವಿಡಿಯೊವನ್ನೆ ಹೋಲುವ ಮತ್ತೊಂದು ವೀಡಿಯೊವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು 26 ಅಕ್ಟೋಬರ್ 2012 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದ ವಿವರಣೆಯ ಪ್ರಕಾರ, ಇದು ಮಾರ್ಚ್ 11, 2011 ರಂದು ಜಪಾನ್‌ಗೆ ಅಪ್ಪಳಿಸಿದ ಸುನಾಮಿಯ ವೀಡಿಯೊವಾಗಿದೆ.

ಭೂಕಂಪವು ಜಪಾನ್‌ನ ಈಶಾನ್ಯ ಕರಾವಳಿಯ ಇಶಿನೋಮಕಿ ನಗರದಲ್ಲಿ ಸುನಾಮಿಯನ್ನು ಉಂಟುಮಾಡಿತು. ‘ಇಶಿನೋಮಕಿ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್’ ಕಂಪನಿಯ ಉದ್ಯೋಗಿಗಳು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ವೀಡಿಯೊವನ್ನು ಇತರ ಯೂಟ್ಯೂಬ್ ಚಾನೆಲ್‌ನಲ್ಲಿ 18ನೇ ಡಿಸೆಂಬರ್ 2011 ರಂದು ಪ್ರಕಟಿಸಲಾಗಿದೆ.

ಇಶಿನೋಮಕಿ ಸಿಟಿಯ ಇಶಿನೋಮಕಿ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್‌ನ ಕೀವರ್ಡ್‌ಗಳನ್ನು ಬಳಸಿಕೊಂಡು, ಮತ್ತಷ್ಟು Google ಸರ್ಚ್ ಮಾಡಿದಾಗ 2:45 ನಿಮಿಷಗಳ ವೈರಲ್ ವೀಡಿಯೊದಲ್ಲಿ ಪ್ರವಾಗದ ಜಾಗ ಮತ್ತು ಕಟ್ಟಡಗಳು ಒಂದೇ ರೀತಿ ಇರುವುದನ್ನು  ನಾವು ಕಂಡುಕೊಂಡಿದ್ದೇವೆ. ನಮಗೆ ಸಿಕ್ಕಿರುವ ದೃಶ್ಯ ಮತ್ತು ವೈರಲ್ ವಿಡಿಯೋದ ಚಿತ್ರವನ್ನು ವಿಶ್ಲೇಷಿಸಿ ಮತ್ತು ಪರಿಶೀಲಿಸಿದಾಗ ವೈರಲ್ ವೀಡಿಯೋ ಪಾಕಿಸ್ತಾನದ್ದಲ್ಲ, ಜಪಾನ್‌ನದು ಎಂಬುದು ಸ್ಪಷ್ಟವಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, 2011 ರಲ್ಲಿ, ಜಪಾನ್‌ನಲ್ಲಿ ಕಾಣಿಸಿಕೊಂಡ ಸುನಾಮಿಯಿಂದಾಗಿ 15 ಸಾವಿರಕ್ಕೂ ಹೆಚ್ಚು ಜನರು ಸಾವನಪ್ಪಿದ್ದರು. ಮಾರ್ಚ್ 11, 2011 ರಂದು, ರಿಕ್ಟರ್ ಮಾಪಕದಲ್ಲಿ 9 ಅಳತೆಯ ಭೂಕಂಪವು ಜಪಾನ್‌ನ ಪೆಸಿಫಿಕ್ ಕರಾವಳಿಯಲ್ಲಿ ತೋಹೊಕುವನ್ನು ಅಪ್ಪಳಿಸಿತು. ಇದರ ನಂತರ ಭಯಾನಕ ಸುನಾಮಿ ಸಂಭವಿಸಿತು, ಈ ಸುನಾಮಿಯಿಂದಾಗಿ ಕ್ಷಣ ಮಾತ್ರದಲ್ಲಿ ಎಲ್ಲವೂ ಕೊಚ್ಚಿಹೋಗಿತ್ತು.

ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ:

ಕಳೆದ ಒಂದು ತಿಂಗಳಿನಿಂದ ಪಾಕಿಸ್ತಾನದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ಥವೆಸ್ಥಗೊಂಡಿದೆ. ಇದರಿಂದಾಗಿ ಪ್ರವಾಹದಲ್ಲಿ ಕನಿಷ್ಠ 549 ಜನರು ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ, ಪ್ರವಾಹದಿಂದಾಗಿ 46,200 ಮನೆಗಳಿಗೆ ಹಾನಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊ ಸುಮಾರು 10 ವರ್ಷಗಳಷ್ಟು ಹಳೆಯದು ಮತ್ತು 2011 ರಲ್ಲಿ ಜಪಾನ್‌ಗೆ ಅಪ್ಪಳಿಸಿದ ಸುನಾಮಿಯದು ಎಂದು ಎಂಬುದು ಸ್ಪಷ್ಟವಾಗಿದೆ. ವಿಡಿಯೋಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪರೀಕ್ಷೆಯಲ್ಲಿ ಪಾಸ್ ಮಾಡಲು ಮೌಲ್ಯಮಾಪಕನಿಗೆ ಲಂಚ ನೀಡಿದ ಹಳೆಯ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights