ಫ್ಯಾಕ್ಟ್‌ಚೆಕ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆಯೇ?

ಬಾಂಗ್ಲಾದೇಶದ ಚಿತ್ತಗಾಂಗ್‌ನ ಬೋಲ್‌ಖಾಲಿಯ ಕಧುರ್‌ಖಿಲ್ ಗ್ರಾಮದಲ್ಲಿ ಹಿಂದೂಗಳ ಒಡೆತನದ ಆರು ದಿನಸಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆಯೊಂದಿಗೆ ಬೆಂಕಿ ಅಪಘಾತದ ನಂತರದ ಕುರುಣಾಜನಕ ಪರಿಸ್ಥಿತಿಯ ದೃಶ್ಯಗಳು ಸಾಮಾಜಿಕ  ಮಾಧ್ಯಮದಲ್ಲಿ ವೈರಲ್ ಆಗಿವೆ.

ವಾಯ್ಸ್ ಆಫ್ ಬಾಂಗ್ಲಾದೇಶದ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಅದೇ ಪ್ರತಿಪಾದನೆಯೊಂದಿಗೆ ಪೋಸ್ಟ್ ಮಾಡಿದೆ. ನಂತರ ಟ್ವೀಟ್ ಅನ್ನು ಅಳಿಸಲಾಗಿದೆ. (ಆರ್ಕೈವ್ ಮಾಡಿದ ಲಿಂಕ್). ಸನಾತನ ಪ್ರಭಾತ್ ಪತ್ರಿಕೆ ಕೂಡ ಈ ಕಥೆಯನ್ನು ವರದಿ ಮಾಡಿದೆ. ವಾಯ್ಸ್ ಆಫ್ ಬಾಂಗ್ಲಾದೇಶದ ಟ್ವೀಟ್ ಪೋಸ್ಟ್‌ನ ರೀತಿಯಲ್ಲೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮ ಮತ್ತು ಕೆಲವು ಸುದ್ದಿ ವರದಿಗಳನ್ನು ಆಧಾರವಾಗಿಟ್ಟುಕೊಂಡು ಆಲ್ಟ್‌ನ್ಯೂಸ್‌ ವರದಿ ಮಾಡಿದ್ದು, ಘಟನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದವರ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಿದೆ.

ಜಾಗೋ ನ್ಯೂಸ್ ವರದಿಯ ಪ್ರಕಾರ, ಆಗಸ್ಟ್ 2 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಕಡೂರುಖಾಲಿ ಸರ್ಕಾರಿ ಪ್ರೌಢಶಾಲೆ ಬಳಿ ಭಾರಿ ಬೆಂಕಿ ಸಂಭವಿಸಿದ್ದು, ಐದು ಅಂಗಡಿಗಳು ಮತ್ತು ಮೂರು ಮೇಕೆಗಳು ಸುಟ್ಟು ಭಸ್ಮವಾಗಿವೆ. ದಿನಸಿ ಅಂಗಡಿ, ಸಲೂನ್, ಎರಡು ತರಕಾರಿ ಅಂಗಡಿಗಳು ಸುಟ್ಟು ಕರಕಲಾಗಿವೆ. ಇದಲ್ಲದೆ, ದೈನಿಕ್ ಆಜಾದಿ, ಚಟ್ಟೋಗ್ರಾಮ್ ನ್ಯೂಸ್, ಚಟ್ಟೋಗ್ರಾಮ್ ಖೋಬೋರ್ ಮತ್ತು ಜಾಗೋ ನ್ಯೂಸ್ ಸೇರಿದಂತೆ ಹಲವಾರು ಮಾಧ್ಯಮಗಳು ಅಂಗಡಿ-ಮಾಲೀಕರಲ್ಲಿ ಇಬ್ಬರು ಮುಸ್ಲಿಮರಾದ ಮುಹಮ್ಮೊದ್ ಮುಹರಂ ಮತ್ತು ಮೊಹಮ್ಮದ್ ಕರೀಮ್ ಎಂದು ಆಲ್ಟ್‌ನ್ಯೂಸ್‌ ವರದಿ ಮಾಡಿದೆ.

ಎಸ್ ಎಂ ಆರಿಫ್ ಎಂಬ ಬೋಲ್‌ಖಾಲಿ ಸ್ಥಳೀಯರೊಬ್ಬರು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಲಭ್ಯವಾಗಿದೆ. ಘಟನೆ ಸಂಭವಿಸಿದ ನಾಲ್ಕು ಗಂಟೆಗಳ ನಂತರ ಅಂದರೆ 8:49 ಗಂಟೆಗೆ ವೀಡಿಯೊವನ್ನು ಅಪ್‌ಲೋಡ್  ಮಾಡಲಾಗಿದ್ದು, ಬೆಂಕಿಯು ವಿದ್ಯುತ್ ಶಾರ್ಟ್-ಸರ್ಕ್ಯೂಟ್‌ನಿಂದ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

ಜಾಗೋ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ಬೋಲ್‌ಖಾಲಿ ಅಗ್ನಿಶಾಮಕ ಸೇವಾ ನಾಯಕ ಹೈದರ್ ಹೊಸೈನ್, “ ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಊಹಿಸುತ್ತಿದ್ದೇವೆ. ಸ್ಥಳೀಯರು ಬೆಂಕಿಯ ಬಗ್ಗೆ ಮಾಹಿತಿ ನೀಡಿದ ನಂತರ (ಬೋಳಖಾಲಿ ಅಗ್ನಿಶಾಮಕ ದಳದ ಸಿಬ್ಬಂದಿ) ನಾವು ಬೆಂಕಿಯನ್ನು ಹತೋಟಿಗೆ ತಂದೆವು ಎಂದಿದ್ದಾರೆ. ಬೆಂಕಿಯಲ್ಲಿ ಕಿರಾಣಿ ಅಂಗಡಿ ಸುಟ್ಟು ಕರಕಲಾದ ರೋನಿ ರಾಯ್ ಕೂಡ ಜಾಗೋ ನ್ಯೂಸ್ ಜೊತೆ ಮಾತನಾಡಿದ್ದು “ನಾನು ಮೂರು ಆಡುಗಳು, ಒಂದು ಮೋಟಾರ್ ಸೈಕಲ್ ಮತ್ತು ಅಂಗಡಿಯಲ್ಲಿನ ಎಲ್ಲಾ ಸಾಮಾನುಗಳನ್ನು ಕಳೆದುಕೊಂಡೆ. ಈ ವಸ್ತುಗಳನ್ನು ಖರೀದಿಸಲು ಸಾಲ ಮಾಡಿದ್ದೆ. ಈ ಬೆಂಕಿ ನನ್ನನ್ನು ಈಗ ಬೀದಿಗಳಲ್ಲಿ ಭಿಕ್ಷೆ ಬೇಡುವಂತೆ ಮಾಡಿದೆ ಎಂದು  ವರದಿ ಮಾಡಿದೆ.

ಅಲ್ಟ್ ನ್ಯೂಸ್ ಬೋಲ್ಖಾಲಿ ಅಗ್ನಿಶಾಮಕ ಸೇವಾ ಠಾಣೆಯ ಅಧಿಕಾರಿಯೊಂದಿಗೆ ಮಾತನಾಡಿ, ಮುಸ್ಲಿಮರು ಮತ್ತು ಹಿಂದೂಗಳ ಒಡೆತನದ ಅಂಗಡಿಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ದೃಢಪಡಿಸಿದರು. ಬೆಂಕಿಯ ಕಾರಣದ ಬಗ್ಗೆ ಕೇಳಿದಾಗ, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಘಟನೆಗೆ ವಿದ್ಯುತ್ ಅವಘಡ ಕಾರಣ ಎಂದು ತಿಳಿದು ಬಂದಿದೆ, ಮತ್ತಷ್ಟು ಪರಿಶೀಲನೆಗಳು ನಡೆಯುತ್ತಿವೆ ಇದೆಲ್ಲವೂ ಮುಗಿದ ನಂತರ ಮತ್ತಷ್ಟು ವರದಿಗಳು ಲಭ್ಯವಾಗುತ್ತವೆ.

ಹೀಗಾಗಿ, ಬಾಂಗ್ಲಾದೇಶದ ಚಿತ್ತಗಾಂಗ್‌ನ ಬೋಲ್‌ಖಾಲಿ ಉಪಜಿಲಾದಲ್ಲಿ ಸಂಭವಿಸಿದ ಅಗ್ನಿ ಅವಘಡದ ನಂತರದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂದೂಗಳ ಒಡೆತನದ ಆರು ದಿನಸಿ ಅಂಗಡಿಗಳಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆಯೊಂದಿಗೆ ಪ್ರಸಾರ ಮಾಡಲಾಯಿತು. ವಾಸ್ತವವಾಗಿ, ಮುಸ್ಲಿಮರು ಮತ್ತು ಹಿಂದೂಗಳ ಅಂಗಡಿಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರ್ಘಟನೆ ಸಂಭವಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪರೀಕ್ಷೆಯಲ್ಲಿ ಪಾಸ್ ಮಾಡಲು ಮೌಲ್ಯಮಾಪಕನಿಗೆ ಲಂಚ ನೀಡಿದ ಹಳೆಯ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.