ಫ್ಯಾಕ್ಟ್‌ಚೆಕ್: ಖ್ಯಾತ ಪತ್ರಕರ್ತ ರವೀಶ್ ಕುಮಾರ್ NDTVಗೆ ರಾಜೀನಾಮೆ ನೀಡಿದ್ದಾರೆಯೆ?

ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಎನ್‌ಡಿಟಿವಿಯ 29.18% ಶೇರು ಪಾಲನ್ನು ಅದಾನಿ ಗ್ರೂಪ್‌ ಪಡೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಜೊತೆಗೆ ಇನ್ನೂ 26% ಶೇರು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್‌ ಕುಮಾರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ.

BJP  ಮತ್ತು ಬಲಪಂಥೀಯ ಪ್ರತಿಪಾದಕಿಯಾದ ಶಕುಂತಲಾ  ಎನ್ನುವವರು ರವೀಶ್‌ ಕುಮಾರ್ ಅವರನ್ನು ಕುರಿತು ಟ್ವೀಟ್ ಮಾಡಿದ್ದು, “ಅದಾನಿ ಕೈ ಕೆಳಕ್ಕೆ ಬಂದ ರವೀಶ್, ಆಗುತ್ತಾ ಮುಂದೆ ಕಮ್ಯುನಿಸ್ಟರ ಕತೆ ಫಿನಿಶ್” ಎಂದು ಟ್ವೀಟ್ ಮಾಡಿದ್ದಾರೆ.

NDTVಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅದಾನಿ ಗ್ರೂಪ್ NDTVಯ ಶೇರುಗಳನ್ನು ಪಡೆದುಕೊಂಡ ಬೆನ್ನಲ್ಲೆ, ಸಾಮಾಜಿಕ ಮಾಧ್ಯಮಗಳಲ್ಲಿ ರವೀಶ್ ಕುಮಾರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಈ ಕುರಿತು ರವೀಶ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಅವರು, “ಪ್ರಧಾನಿ ನರೇಂದ್ರ ಮೋದಿ ನನ್ನೊಂದಿಗೆ ಸಂದರ್ಶನಕ್ಕೆ ತಯಾರಾದಂತೆ, ಅಕ್ಷಯ್‌ ಕುಮಾರ್‌ ಗೇಟಿನ ಬಳಿ ಮಾವಿನ ಹಣ್ಣುಗಳನ್ನು ಹಿಡಿದುಕೊಂಡು ನಿಂತಂತೆ ನನ್ನ ರಾಜೀನಾಮೆ ವಿಚಾರ ಕೂಡಾ ಒಂದು ವದಂತಿ ಮಾತ್ರವಾಗಿದೆ” ಎಂದು ಸಾರ್ವಜನಿಕರನ್ನು ಉಲ್ಲೇಖಿಸಿ ಹೇಳಿದ್ದಾರೆ. ಜೊತೆಗೆ ಕೊನೆಯಲ್ಲಿ ರವೀಶ್‌ ಕುಮಾರ್, ವಿಶ್ವದ ಪ್ರಥಮ ಅತೀ ದುಬಾರಿ ಝೀರೋ ಟಿಆರ್‌ಪಿ ನಿರೂಪಕ ಎಂದು ತಮ್ಮ ಕುರಿತು ತಾವೇ ವ್ಯಂಗ್ಯವಾಡಿದ್ದಾರೆ.

ಅದಾನಿ ಸಮೂಹ NDTV ಶೇರು ಖರೀದಿ ಮಾಡಿರುವುದು ತಮ್ಮ ಗಮನಕ್ಕೆ ಈಗಷ್ಟೆ ತಿಳಿದುಬಂದಿದೆ ಎಂದು ಎನ್‌ಡಿಟಿವಿ ಸಂಪಾದಕ ಬಳಗ ತಿಳಿಸಿದೆ. ತಮ್ಮ ಇದುವರೆಗಿನ ಸತ್ಯ ಮತ್ತು ನ್ಯಾಯದ ಪರವಾಗಿನ ವರದಿಗಾರಿಕೆಯನ್ನು ಮುಂದೆಯೂ ಮುಂದುವರೆಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವಂತೆ ಅದಾನಿ ಗ್ರೂಪ್ NDTVಯ ಷೇರು ಖರೀದಿಸಿದಕ್ಕೆ ರವೀಶ್ ಕುಮಾರ್ ಅವರು ರಾಜಿನಾಮೆ ನೀಡಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕ್‌ನಲ್ಲಿ ಪ್ರವಾಹ ಎಂದು, ಜಪಾನ್‌ನ ಹಳೆಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights