ಫ್ಯಾಕ್ಟ್‌ಚೆಕ್: ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಿದಕ್ಕೆ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದರೆ?

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ. ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ಪರಿ ಮತ್ತು ಆಕೆಯ ಬಿಕಿನಿ ಬಣ್ಣ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಒಂದೆಡೆ ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಚಿತ್ರದ ದೃಶ್ಯಗಳು ಮತ್ತು ಬಟ್ಟೆಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರೆ, ಮತ್ತೊಂದೆಡೆ ಜನರು ಪೋಸ್ಟರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

2023 ಜನವರಿ 25,  ರಂದು ಬಿಡುಗಡೆಯಾಗಲಿರುವ ‘ಪಠಾಣ್’ ಚಿತ್ರಕ್ಕೆ ಬಾಯ್ಕಾಟ್ ಸದ್ದು ಜೋರಾಗಿ ಕೇಳಿ ಬರುತ್ತಿರುವುದು ಚಿತ್ರ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಹಾಗಾಗಿ ‘ಪಠಾಣ್’ ಚಿತ್ರ ಬಾಯ್ಕಾಟ್ ಅಭಿಯಾನದಿಂದ ಬೇಸೆತ್ತ ದೀಪಿಕಾ ಪಡುಕೋಣೆ ಅಳುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಮಾಜವಾದಿ ಪಕ್ಷದ ನಾಯಕ IP singh ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಪ್ರಕಾಶ್ ಪಡುಕೋಣೆ ಅವರ ಮಗಳು ಮತ್ತು ಚಲನಚಿತ್ರ ನಟ ರಣವೀರ್ ಅವರ ಪತ್ನಿ. ಬಿಜೆಪಿ ಮತ್ತು ಅವರ ಸರ್ಕಾರಕ್ಕೆ ಇವರ ಕಣ್ಣೀರು ತಕ್ಕ ಉತ್ತರ ನೀಡುತ್ತದೆ, ಈ ಚಿತ್ರ ಪ್ರಪಂಚದಾದ್ಯಂತ ಖ್ಯಾತಿ ಪಡೆಯುತ್ತದೆ ಮತ್ತು ಈ ಚಿತ್ರ 500 ಕೋಟಿಗೂ ಹೆಚ್ಚು ಗಳಿಸಲಿದೆ” ಎಂದು ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ದೀಪಿಕ ಪಡುಕೋಣೆ ಕಣ್ಣೀರು ಹಾಕಿದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೀಪಿಕಾ ಪಡುಕೋಣೆ ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಕ್ಟೋಬರ್ 2018 ರಲ್ಲಿ ದೀಪಿಕಾ ಪಡುಕೋಣೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ. ಖಿನ್ನತೆಯನ್ನು ನಿಭಾಯಿಸುವಲ್ಲಿ ಅವರ ಅನುಭವದ ಬಗ್ಗೆ ಮಾತನಾಡಿರುವ ವಿಡಿಯೋ ಅದಾಗಿದೆ.

ವಿಶ್ವ ಮಾನಸಿಕ ಆರೋಗ್ಯ ದಿನದಂದು ದೀಪಿಕಾ ಪಡುಕೋಣೆ ಖಿನ್ನತೆಯನ್ನು ನಿಭಾಯಿಸುವ ಹೋರಾಟದ ಕುರಿತು ಮಾತನಾಡುವಾಗ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವೈರಲ್ ವೀಡಿಯೊ 2018 ರ ವೀಡಿಯೊ ಎಂದು BOOM ಕಂಡುಹಿಡಿದಿದೆ. ವೈರಲ್ ವೀಡಿಯೊದಲ್ಲಿ ದೀಪಿಕಾ ಭಾವುಕರಾಗುವುದಕ್ಕೂ ಪಠಾಣ್ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಬೂಮ್ ಹೇಳಿದೆ.

ಪಡುಕೋಣೆ ಅವರು 2014 ರಲ್ಲಿ ಖಿನ್ನತೆಗೆ ಒಳಗಾಗಿದ್ದ ಸಂದರ್ಭವನ್ನು ನೆನೆದು ಭಾವುಕರಾಗಿದ್ದರು ಎಂದು NDTV ವರದಿ ಮಾಡಿದೆ.  ಭಾರತದಲ್ಲಿ ಖಿನ್ನತೆಯಿಂದ ಬಳಲುತ್ತಿರುವ ಶೇಕಡಾ 90 ರಷ್ಟು ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ ಎಂದು ದೀಪಿಕಾ ಹೇಳಿದ್ದರು ಎಂದು NDTV ಅಕ್ಟೋಬರ್ 10, 2018 ರಂದು ವಿಡಿಯೋ ವರದಿಯನ್ನು ಪ್ರಕಟಿಸಿದೆ.

“ದೀಪಿಕಾ ಯಾವ ಹಿಂಜರಿಕೆ ಇಲ್ಲದೆ ತನ್ನ ಕಥೆಯನ್ನು ಹಂಚಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಅನುಭವಿಸುವ ಅವಮಾನವನ್ನು ಅವರು ಜಯಿಸಿದ್ದಾರೆ, ದೀಪಿಕಾ ಅವರಂತೆ ನಿಮ್ಮ ಮಾನಸಿಕ ಆರೋಗ್ಯ ಪ್ರಯಾಣದ ಕಥೆಯನ್ನು ನೀವು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ, ಈ ಕಾರ್ಯವು ಖಿನ್ನತೆಯಿಂದ ಬಳಲುತ್ತಿರುವ ಇತರರನ್ನು ಸಶಕ್ತಗೊಳಿಸುತ್ತದೆ ಎಂದು ನಾವು ನಂಬುತ್ತೇವೆ” ಎಂದು ND TV ಲೇಖನವನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಖಿನ್ನತೆಗೆ ಸಂಬಂಧಿಸಿದಂತೆ NDTVಗೆ ನೀಡಿದ ಸಂದರ್ಶನದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯಗಳನ್ನು ಪಠಾಣ್ ಚಿತ್ರವನ್ನು ಬಹಿಷ್ಕರಿಸಿದ್ದ ಕಾರಣಕ್ಕೆ ಅಳುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿ ಘೋಷಿಸಿರುವ ಬಗ್ಗೆ ದೀಪಿಕಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಫುಟ್ಬಾಲ್ ದಂತಕಥೆ ಪೀಲೆ ನಿಧನ ಎಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights