ಫ್ಯಾಕ್ಟ್‌ಚೆಕ್: ಮುಸ್ಲಿಂ ಬಾಯ್ ಫ್ರೆಂಡ್‌ನಿಂದ ನಿಕ್ಕಿ ಯಾದವ್ ಹತ್ಯೆಯಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

23 ವರ್ಷದ ನಿಕ್ಕಿ ಯಾದವ್ ಅವರನ್ನು ದೆಹಲಿಯಲ್ಲಿ ಆಕೆಯ ಮುಸ್ಲಿಂ ಬಾಯ್ ಫ್ರೆಂಡ್ ಮೊಹಮ್ಮದ್ ಸಾಹಿಲ್ ಕತ್ತು ಹಿಸುಕಿ ಹತ್ಯೆಗೈದಿದ್ದು, ನಂತರ ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟಿದ್ದ ಎಂದು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಮುಸ್ಲಿಮರ ಲವ್ ಜಿಹಾದ್‌ಗೆ ಮತ್ತೊಬ್ಬ ಅಮಾಯಕ ಹಿಂದೂ ಯುವತಿ ಬಲಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ದೆಹಲಿಯಲ್ಲಿ ನಡೆದಿರುವ ನಿಕ್ಕಿ ಯಾದವ್ ಹತ್ಯೆ ಪ್ರಕರಣದ ಆರೋಪಿ ಮತ್ತು ನಿಕ್ಕಿ ಯಾದವ್ ಪ್ರಿಯಕರ ಮುಸ್ಲಿಮನಲ್ಲ. ಆತ ಹಿಂದೂ ಸಮುದಾಯದವನಾಗಿದ್ದು ಆತನ ಹೆಸರು ಸಾಹಿಲ್ ಗೆಹ್ಲೋಟ್ ಎಂದು ತಿಳಿದುಬಂದಿದೆ.

ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಯುವತಿಯ ಮೃತದೇಹ ಪತ್ತೆಯಾದ್ದು. ಪ್ರಕರಣದ ಆರೋಪಿ ಸಾಹಿಲ್ ಗೆಹ್ಲೋಟ್ (24) ಮತ್ತು ಮೃತ ಯುವತಿ ನಿಕ್ಕಿ ಯಾದವ್ (23)  ಇಬ್ಬರೂ ಒಂದೇ (ಹಿಂದೂ) ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿರುವ ಪತ್ರಿಕಾ ಟಿಪ್ಪಣಿಯಲ್ಲಿ ಗೆಹ್ಲೋಟ್ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಿ ಕ್ವಿಂಟ್ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್‌ನ ಜಂಟಿ ಆಯುಕ್ತ ಎಸ್‌ಡಿ ಮಿಶ್ರಾ ಅವರನ್ನು  ಸಂಪರ್ಕಿಸಿದ್ದು,  “ಪ್ರಕರಣದಲ್ಲಿ ಬಂಧಿತ ಆರೋಪಿ ಸಾಹಿಲ್ ಗೆಹ್ಲೋಟ್ ಮುಸ್ಲಿಂ ಸಮುದಾಯಕ್ಕೆ ಸೇರಿದವನಲ್ಲ” ಹಿಂದೂ ಸಮುದಾಯದವನು ಎಂದು ದಿ ಕ್ವಿಂಟ್‌ಗೆ ತಿಳಿಸಿದ್ದಾರೆ.

ಕ್ರೈಂ ಬ್ರಾಂಚ್‌ನಲ್ಲಿ ದಾಖಲಾಗಿರುವ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿ ಸಾಹಿಲ್ ಗೆಹ್ಲೋಟ್ ಹೆಸರನ್ನೂ ಕಾಣಬಹುದು. ಕೊಲೆಯಾದ ದಿನವೇ ಆರೋಪಿ ತನ್ನ ಲಿವ್ ಇನ್ ಪಾರ್ಟನರ್   ನಿಕ್ಕಿಯನ್ನು ಕೊಂದು ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ನಿಕ್ಕಿ ಕೊಲೆಗೆ ಕಾರಣ:

ಸಾಹಿಲ್ ತನಗೆ ಮದುವೆ ನಿಶ್ಚಯವಾಗಿರುವ ವಿಷಯವನ್ನು ನಿಕ್ಕಿ ಯಾದವ್‌ಳಿಂದ ಮುಚ್ಚಿಟ್ಟ ನಿಕ್ಕಿಯೊಂದೆ ಲೀವ್ ಇನ್ ರಿಲೇಷನ್‌ನಲ್ಲಿ ಇದ್ದ. ಫೆಬ್ರವರಿ 9 ರಂದು ನಿಶ್ಚಿತಾರ್ಥ ಮುಗಿದ ಬಳಿಕ ಸಾಹಿಲ್ ಮತ್ತು ನಿಕ್ಕಿ ಪ್ರವಾಸಕ್ಕೆಂದು ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸಾಹಿಲ್‌ನ ಮದುವೆ ಫೆಬ್ರವರಿ 10 ರಂದು ನಿಗದಿಯಾಗಿದ್ದ ಕಾರಣ, ಸಾಹಿಲ್‌ನ ಕುಟುಂಬದ ಸದಸ್ಯರಿಂದ ಅವನ ಫೋನ್‌ಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು, ನಿಕ್ಕಿಗೆ ಇದರಿಂದ ಅನುಮಾನ ಹೆಚ್ಚಾಗಿ ರಂಪಾಟ ಮಾಡಿದ್ದಾಳೆ. ಈ ವಿಚಾರವಾಗಿ ನಿಕ್ಕಿ ಮತ್ತು ಸಾಹಿಲ್ ನಡುವೆ ವಾಗ್ವಾದ ನಡೆದಿದೆ. ಸಾಹಿಲ್‌ ಮತ್ತು ಆತನ ಕುಟುಂಬದವರ ವಿರುದ್ದ ವಂಚನೆ ಆರೋಪವನ್ನು ದಾಖಲಿಸುವುದಾಗಿ ಸಾಹಿಲ್‌ಗೆ ಹೆದರಿಸಿದ್ದಾಳೆ.

ಇದರಿಂದ ಭಯಗೊಂಡ ಸಾಹಿಲ್ ಮುಂದೆ ತನ್ನ ಮದುವೆ ಮತ್ತುಕುಟುಂಬದವರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಸಾಹಿಲ್ ಕಾರಿನಲ್ಲಿದ್ದ ಮೊಬೈಲ್ ಚಾರ್ಜರ್​ನ ವೈರ್ ತೆಗೆದು ನಿಕ್ಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ನಿಕ್ಕಿಯನ್ನು ಕೊಂದ ಬಳಿಕ ಸಾಹಿಲ್ ತನ್ನ ಜಮೀನಿನಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲಿದ್ದ ಫ್ರಿಡ್ಜ್​ನಲ್ಲಿ ನಿಕ್ಕಿ ಮೃತದೇಹವನ್ನು ಇಟ್ಟು ತನ್ನ ಮನೆಗೆ ತೆರಳಿದ್ದ. ಮರುದಿನ ಅಂದರೆ ಫೆಬ್ರವರಿ 10 ರಂದು ವಿಧಿವತ್ತಾಗಿ ಮದುವೆಯಾಗಿದ್ದ. ನಂತರ ಈ ಕೊಲೆ ಪ್ರಕರಣ ಬಹಿರಂಗವಾಗಿದೆ.

ದೆಹಲಿ ಕ್ರೈಂ ಬ್ರಾಂಚ್ ನೀಡಿದ ಪ್ರಕರಣದ ಪತ್ರಿಕಾ ಪ್ರಕಟಣೆಯ ಪ್ರಕಾರ, ಬಂಧಿತ ಆರೋಪಿಯನ್ನು ದೆಹಲಿಯ ಮಿತ್ರಾನ್, ಪದಾರ್ಥ್ ರಾಣಾ ನಿವಾಸಿ,  ವೀರೇಂದ್ರ ಸಿಂಗ್ ಅವರ ಮಗ ಸಾಹಿಲ್ ಗೆಹ್ಲೋಟ್, 24 ಎಂದು ಹೆಸರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪ್ರಕರಣದಲ್ಲಿ ಕೊಲೆ ಆರೋಪಿ ಸಾಹಿಲ್ ಗೆಹ್ಲೋಟ್ ಮತ್ತು ಕೊಲೆಯಾದ ಯುವತಿ ನಿಕ್ಕಿ ಯಾದವ್ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಆರೋಪಿ ಮುಸ್ಲಿಂ ಮತ್ತು ಪ್ರಕರಣವನ್ನು ಲವ್ ಜಿಹಾದ್ ಎಂದು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಗ್ಗಿ ವಾಸುದೇವ್ ಮತ್ತವರ ಮಗಳ ಫೋಟೊ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights