ಫ್ಯಾಕ್ಟ್‌ಚೆಕ್ : ಕರ್ನಾಟಕದ ಚುನಾವಣಾ ಪ್ರಚಾರದ ನಡುವೆ ಪೆಟ್ಟಿಗೆ ಅಂಗಡಿಯಲ್ಲಿ ಟೀ ಸೇವಿಸಿದರೆ ಮೋದಿ?

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇರುವಾಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದ್ದು, ಗೆಲುವಿಗಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಎದುರಾಳಿಗಳನ್ನು ಸೋಲಿಸಲು ಕೊನೆಯ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.

ಕರುನಾಡ ಕುರುಕ್ಷೇತ್ರ ಗೆಲ್ಲಲು ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯದಲ್ಲೇ ಠಿಕಾಣಿ ಹೂಡಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಬಿಜೆಪಿ ಕೊನೆಯ ಮತ್ತು ದೊಡ್ಡ ಅಸ್ತ್ರವಾದ ಪ್ರಧಾನಿ ನರೇಂದ್ರ ಮೋದಿ ಕೂಡ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸಮಾವೇಶ ಮತ್ತು ರೋಡ್ ಶೋ ನಡೆಸುತ್ತಿದ್ದಾರೆ.

ಮೋದಿಯವರ ರೋಡ್‌ ಶೋ ಸಂದರ್ಭದಲ್ಲಿ ಮೋದಿ ಸಾಗಿದ ಮಾರ್ಗದಲ್ಲಿ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀ ಸ್ಟಾಲ್ ಮುಂದೆ ನಿಂತು ಮತಯಾಚನೆ ಮಾಡುತ್ತ ಟೀ ಸೇವಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಟೀ ಅಂಗಡಿ ಮಾಲಿಕ ಪ್ರಧಾನಿ ಮೋದಿಯವರ ಭೇಟಿಯಿಂದಾಗಿ ತನಗಾದ ಸಂತೋಷವನ್ನು ವ್ಯಕ್ತಪಡಿಸುತ್ತ ಮಾತನಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟೀ ಅಂಗಡಿಗೆ ಭೇಟಿ ನೀಡಿದ್ದರು ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಹಂಚಿಕೊಂಡಿದ್ದಾರೆ. ಫೆಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಟೀ ಅಂಗಡಿಯ ಮಾಲಿಕ ಹಿಂದಿಯಲ್ಲಿ ಮಾತನಾಡುವುದನ್ನು ಕಾಣಬಹುದು. ಹಾಗಾಗಿ ಈ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, 2022 ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ರೋಡ್‌ ಶೋ ನಡೆಸಿದ ಸಂದರ್ಭದ ದೃಶ್ಯಗಳು ಎಂದು ತಿಳಿದುಬಂದಿದೆ. ವಾರಣಾಸಿ ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವೂ ಹೌದು.

ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇದೇ ರೀತಿಯ ವೀಡಿಯೊ ಲಭ್ಯವಾಗಿದೆ. ವಿಡಿಯೋವನ್ನು 4 ಮಾರ್ಚ್ 2022 ರಂದು “ಕಾಶಿಯಲ್ಲಿ ಪ್ರಧಾನಿ ಮೋದಿಯವರು ಬಿಸಿ ಬಿಸಿ  ‘ಟೀ’ ಅನ್ನು ಆಸ್ವಾದಿಸಿ ಆನಂದಿಸುವ ಮರೆಯಲಾಗದ ಕ್ಷಣಗಳು!” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಲಾಗಿದೆ.

ಮಾರ್ಚ್ 2022 ರಲ್ಲಿ ಇದೇ ಘಟನೆಯನ್ನು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ANI ವರದಿಯ ಪ್ರಕಾರ, “ಪ್ರಧಾನಿ ಮೋದಿ ಮಾರ್ಚ್ 4 ರಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ರೋಡ್‌ಶೋ ವೇಳೆ ಟೀ ಸ್ಟಾಲ್‌ನಲ್ಲಿ ಒಂದು ಕಪ್ ಚಹಾವನ್ನು ಆನಂದಿಸಿದರು. ಅವರು ಟೀ ಸೇವಿಸಿದ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ ಗೌರವ ಸಲ್ಲಿಸಿದರು ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನರೇಂದ್ರ ಮೋದಿ 2022ರಲ್ಲಿ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಕಾಶಿಯಲ್ಲಿ ರೋಡ್‌ ಶೋ ನಡೆಸಿದ ನಂತರ ಸ್ಥಳಿಯ ಪುಟ್ಟ ಟೀ ಅಂಗಡಿಯೊಂದರಲ್ಲಿ  ಟೀ  ಕುಡಿದ ವಿಡಿಯೋವನ್ನು, ಕರ್ನಾಟಕದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಜಿಂದಾಬಾದ್ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ಮೇಲೆ ಗರಮ್ಮಾದರೆ ಗೌತಮ್ ಗಂಭೀರ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights