ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಲು ಕರಾವಳಿ ಭಾಗದಲ್ಲಿ ಹರಿದಾಡುತ್ತಿದೆ ಎಡಿಟ್ ಮಾಡಿದ ವಿಡಿಯೋ!

ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. 2023ರ ವಿಧಾನಸಭಾ ಚುನಾವಣೆಗೆ ಇದೇ ಮೇ ತಿಂಗಳ 10ನೇ ತಾರೀಖಿಗೆ ಮತದಾನ ನಡೆಯಲಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಣುತ್ತಿರುವುದರಿಂದ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿ ಕರ್ನಾಟಕದಲ್ಲಿ ಶತಾಯಗತಾಯ BJP ಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರಲೇಬೇಕೆಂದು ತಿರ್ಮಾನಿಸಿ ಪ್ರಚಾರದ ಮೇಲೆ ಪ್ರಚಾರ ಮಾಡುತ್ತಿದ್ದಾರೆ.

ಇದೇ ಕಾರಣಕ್ಕೆ ಕರ್ನಾಟಕಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಾ ರೋಡ್ ಶೋ.., ರ್ಯಾಲಿಗಳನ್ನು ನಡೆಸುತ್ತಾ ಡಬ್ಬಲ್ ಇಂಜಿನ್ ಸರ್ಕಾವನ್ನು ಬೆಂಬಲಿಸುವಂತೆ ಮದಾರರಲ್ಲಿ ವಿನಂತಿಸುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಅಷ್ಟೇ ಜೋರಾಗಿ ಚುನಾವಣಾ ಪ್ರಚಾರ ಮಾಡುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಕೂಡ ರಾಷ್ಟ್ರ ನಾಯಕರ ಮೊರೆ ಹೋಗಿದ್ದು, ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಚುನಾವಣಾ ಮತ ಭೇಟಿ ವೇಳೆ ಆರೋಪ ಪ್ರತ್ಯಾರೋಪಗಳು ಮಾಡುವುದು ಮಾಮೂಲು, ಆದರೆ ಕರ್ನಾಟಕದಲ್ಲಿ ಇದರ ಟ್ರೆಂಡ್ ಜೋರಾಗಿಯೇ ಇದೆ. ಇತ್ತೀಚೆಗೆ ಭಾರತ್ ಜೋಡೋದಂತಹ ಕಾರ್ಯಕ್ರಮದ ಮೂಲಕ ಜನಮಾನಸದಲ್ಲಿ ಹೆಚ್ಚು ಪ್ರಶಂಸೆಗೆ ಪಾತ್ರರಾಗಿರುವ ರಾಹುಲ್ ಗಾಂಧಿ ಬಗ್ಗೆ BJP ಬೆಂಬಲಿಗರು ಮತ್ತು ಐಟಿ ಸೆಲ್‌ಗಳು ಕೆಲವು ಹಳೆಯ ವಿಡಿಯೋಗಳನ್ನು ಬಳಸಿ ರಾಹುಲ್ ಗಾಂಧಿ ಪಪ್ಪು ಇದ್ದ ಹಾಗೆ ಎಂದು ವ್ಯಂಗ್ಯದ ಹೇಳಿಕೆ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಹಿಂದುತ್ವದ ಅಜೆಂಡಗಳು ಪ್ರತಿಫಲಿಸದ ಕಾರಣ ರಾಹುಲ್ ಗಾಂಧಿಯನ್ನು ಟೀಕೆ ಮಾಡಲು ಕೆಲವು ವಿಡಿಯೋಗಳನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತದೆ. ಹಾಗಿದ್ದರೆ ವೈರಲ್ ವಿಡಿಯೋದಲ್ಲಿ ಏನಿದೆ ನೋಡೋಣ.

ವೈರಲ್ ವಿಡಿಯೋದಲ್ಲಿ ಏನಿದೆ?

ವಿದ್ಯಾರ್ಥಿಗಳೊಂದಿಗಿನ ಸಂವಾದಂತೆ ಕಾಣುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪೆದ್ದು ಪೆದ್ದಾಗಿ ಉತ್ತರ ನೀಡುತ್ತಿರುವಂತೆ ಕಾಣುತ್ತಿದೆ. ಒಮ್ಮೆ ಐ ಲವ್ ನರೇಂದ್ರ ಮೋದಿ ಎಂದು ಹೇಳಿದಾಗ ವಿದ್ಯಾರ್ಥಿಗಳು ಮೋದಿ ಮೋದಿ ಎಂದು ನಿರಂತರವಾಗಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಮೇಲೆ ಹುಡುಗಿಯೊಬ್ಬಳು ನಿರುದ್ಯೋಗ, ಫಲದಾಯಕವಲ್ಲದ ಉದ್ಯೋಗಾವಕಾಶ, ಇವುಗಳನ್ನು ಕುರಿತು ಪ್ರಶ್ನೆ ಕೇಳುತ್ತಾಳೆ. ಅದಕ್ಕೆ ರಾಹುಲ್ ಗಾಂಧಿ ಅಸ್ಪಷ್ಟವಾಗಿ ಉತ್ತರಿಸುವಂತ ದೃಶ್ಯಗಳನ್ನು ಈ ವಿಡಿಯೋ ಒಳಗೊಂಡಿದೆ. ಕೆಲವರು ಈ ವಿಡಿಯೋ ದೃಶ್ಯಗಳನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂಗೆ ವಿನಂತಿಸಿದ್ದಾರೆ. ಹಾಗಾಗಿ ಈ ವಿಡಿಯೋ ದೃಶ್ಯಾವಳಿಗಳ ವಾಸ್ತವೇನೆಂದು ಪರಿಶೀಲಿಸೋಣ.

ವಾಸ್ತವವೇನು?

ಸದ್ಯ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಮೂಲ ವಿಡಿಯೋ 2019 ಏಪ್ರಿಲ್ 4 ರಂದು ಪುಣೆಯಲ್ಲಿ ವಿದ್ಯಾರ್ಥಿಗಳು ರಾಹುಲ್ ಗಾಂಧಿಯೊಂದಿಗೆ ನಡೆಸಿದ ಸಂವಾದದ ದೃಶ್ಯಗಳು ಎಂದು ತಿಳಿದು ಬಂದಿದೆ. ವಾಸ್ತವವಾಗಿ ಈ ಸಂವಾದ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಗು ನಗುತ್ತಾ ಉತ್ತರ ನೀಡುತ್ತಾರೆ ಎಂದು ANI ವರದಿ ಮಾಡಿದೆ.

ಪ್ರೀತಿ ಮತ್ತು ದ್ವೇ‍‍ಷಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ರಾಹುಲ್ ಗಾಂಧಿ ಅವರು I Love Mr. Narendra Modi ಎಂದು ಹೇಳಿದಾಗ ಕೆಲ ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಕೂಗುತ್ತಾರೆ. ಅದನ್ನು ಹೊರತು ಪಡಿಸಿ ವೈರಲ್ ವಿಡಿಯೋದಲ್ಲಿ ಇರುವಂತೆ ಸಂವಾದದ ಉದ್ದಕ್ಕೂ ನಿರಂತರವಾಗಿ ಘೋಷಣೆಯನ್ನು ಕೂಗಿಲ್ಲ ಎಂಬುದು ಮೂಲ ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್

ಪುಣೆಯಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡುತ್ತ, ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿಯ ದ್ವೇಷ ಭಾವ ನನಗಿಲ್ಲ . ಆದರೆ ಅವರಿಗೆ ನನ್ನ ಮೇಲೆ ಅಂತಹ ಪ್ರೀತಿಯ ಭಾವವಿಲ್ಲ, ಬದಲಾಗಿ ಕೋಪವಿದೆ ಎಂದು ರಾಹುಲ್ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಕೆಲ ವಿದ್ಯಾರ್ಥಿಗಳು “ಮೋದಿ ಮೋದಿ” ಎಂದು ಕೂಗುತ್ತಾರೆ. ಅದಕ್ಕವರು ”ಇಟ್ಸ್ ಫೈನ್, ಇಟ್ಸ್ ಒಕೆ”, ಎಂದು ಪ್ರತಿಕ್ರಿಯಿಸಿದರು.

ರಾಹುಲ್ ಗಾಂಧಿ, ಮೋದಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ ಹಲವು ಉದಾಹರಣೆಗಳಿವೆ, 2019 ಮಾರ್ಚ್ ತಿಂಗಳಲ್ಲಿ ಚೈನ್ನೈನಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲೂ ತಾವು ಸಂಸತ್ತಿನಲ್ಲಿ ಮೋದಿ ಅವರನ್ನು ಅಪ್ಪಿದ್ದೇಕೆ ಎಂದು ಹೇಳಿದ್ದರು. ಮೋದಿ ಅವರಿಗೆ ಸರಿಯಾದ ಪ್ರೀತಿ ಸಿಕ್ಕಿಲ್ಲ. ಅವರಲ್ಲಿರುವ ದ್ವೇಷ ಭಾವವನ್ನು ಹೋಗಲಾಡಿಸಲು ನಾನು ತಬ್ಬಿಕೊಂಡಿದ್ದೆ ಎಂದಿದ್ದರು. ಈ ಸುದ್ದಿಯನ್ನು ND Tv ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ತನ್ನ ತಂಗಿ ಪ್ರಿಯಾಂಕ ಬಗ್ಗೆ ಮಾನಾಡಿದ್ದ ರಾಹುಲ್

ಇತ್ತೀಚಿಗೆ ಸಕ್ರಿಯ ರಾಜಕಾರಣಕ್ಕಿಳಿದ ಸಹೋದರಿಯೊಂದಿಗಿನ ಬಾಂಧವ್ಯ, ತಮ್ಮಿಬ್ಬರ ಬಾಲ್ಯದ ಬಗ್ಗೆ ರಾಹುಲ್ ಮಾತನಾಡಿ, ನನ್ನ ತಂಗಿಯೇ ನನ್ನ ಬೆಸ್ಟ್ ಫ್ರೆಂಡ್. ನಾವಿಬ್ಬರು ಒಬ್ಬರನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ನಮ್ಮ ನಡುವೆ ವಾದ ನಡೆದರೆ ಕೆಲವೊಮ್ಮೆ ಅವಳೇ ಸುಮ್ಮನಾಗುತ್ತಿದ್ದಳು, ಮತ್ತೆ ಕೆಲವೊಮ್ಮೆ ನಾನು. ಆಕೆ ಕಟ್ಟಿದ ರಾಖಿ ಅದಾಗಿಯೇ ತುಂಡಾಗುವವರೆಗೂ ನಾನು ತೆಗೆಯುತ್ತಿರಲಿಲ್ಲ ಎಂದು ರಾಹುಲ್ ತಮ್ಮ ತಂಗಿಯ ಮೇಲಿನ ಪ್ರೀತಿ, ಗೌರವ ಎಂತದ್ದು ಎಂದು ವಿವರಿಸಿದ್ದರು. ನಿಮ್ಮಿಬ್ಬರ ನಡುವೆ ಜಗಳ ನಡೆಯುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಮೊದಲೆಲ್ಲ ಜಗಳವಿರುತ್ತಿತ್ತು ಎಂದು ಹೇಳಿದ್ದರು.

ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟ ಅವರು, ಅಜ್ಜಿ ಇಂದಿರಾ ಗಾಂಧಿ ಮನೆಗೆ ಬರುವಾಗ ನಾನು ಆಕೆಯ ಕೋಣೆಯಲ್ಲಿದ್ದ ಕರ್ಟನ್ ಹಿಂದೆ ಅಡಗಿ ಕುಳಿತಿರುತ್ತಿದ್ದೆ. ಆಕೆಯನ್ನು ಹೆದರಿಸುವುದು ನನ್ನ ಉದ್ದೇಶವಾಗಿತ್ತು. ಅವರು ಕೂಡ ಹೆದರಿದಂತೆ ನಟಿಸುತ್ತಿದ್ದರು ಎಂದಿದ್ದರು. ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಉಲ್ಲೇಖಿಸಿ ಹಿಂಸಾಚಾರ ನಮ್ಮ ಕುಟುಂಬವನ್ನು ಅತಿಯಾಗಿ ಬಾಧಿಸಿದೆ ಎಂದು ರಾಹುಲ್ ಹೇಳಿದ್ದರು.

ನಿರುದ್ಯೋಗದ ಬಗ್ಗೆ ವಿದ್ಯಾರ್ಥಿನಿ ಕೇಳಿದ  ಪ್ರಶ್ನೆಗೆ ಪ್ರತಿಕ್ರಿಸಿದ ರಾಹುಲ್ ಭಾರತದಲ್ಲಿ ಗಂಟೆಗೆ 27,000 ಉದ್ಯೋಗಗಳು ಕಳೆದು ಹೋಗುತ್ತಿವೆ ಎಂದು ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಮಾತನಾಡಿದ್ದರು. ರಾಜಕಾರಣಿಗಳು ಯಾವಾಗ ನಿವೃತ್ತಿ ಘೋಷಿಸಬೇಕು ಎಂದು ಕೇಳಿದ ಪ್ರಶ್ನೆಗೆ, 60, ಅದಕ್ಕೆ ಸೂಕ್ತ ವಯಸ್ಸು ಎಂದು ತಿಳಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಪುಣೆ ವಿದ್ಯಾರ್ಥಿಗಳೊಂದಿಗೆ 2019ರಲ್ಲಿ ನಡೆಸಿದ ಸಂವಾದದ ತುಣುಕನ್ನು ಎಡಿಟ್ ಮಾಡಿ ಹಂಚಿಕೊಳ್ಳುತ್ತಾ, ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಮೋದಿ ಮೋದಿ ಎಂದು ವಿದ್ಯಾರ್ಥಿಗಳು ನಿರಂತರವಾಗಿ ಕೂಗುತ್ತಿರುವಂತೆ ಹಂಚಿಕೊಳ್ಳಲಾಗಿದೆ. ಆದರೆ ವಾಸ್ತವವಾಗಿ ಆ ರೀತಿ ವಿದ್ಯಾರ್ಥಿಗಳು ಕೂಗಿಲ್ಲ, ನಂತರ ರಾಹುಲ್ ಗಾಂಧಿ ನಗು ನಗುತ್ತಾ ಉತ್ತರಿಸಿರುವುದು Indian National Congress ತನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಕರಾವಳಿ ಭಾಗದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಎಡಿಟ್ ಮೂಲಕ ತಿರುಚಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  Fact Check : ಕುಸ್ತಿಪಟುಗಳ ಪ್ರತಿಭಟನೆಗೆ ನೀಲಿ ಚಿತ್ರನಟಿಯರ ಬೆಂಬಲ ಎಂಬ ಎಡಿಟೆಡ್ ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights