FACT CHECK | ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೂ ನೀವು ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದ್ರಾ ನಿತಿನ್‌ ಗಡ್ಕರಿ ? ಈ ಸ್ಟೋರಿ ಓದಿ

ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ನೀವು ಟೋಲ್‌ ಶುಲ್ಕ ಕಟ್ಟುವಂತಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ ೆಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ವಾಟ್ಸಾಪ್ ನಲ್ಲಿ ಕಂಡುಬಂದ ಮೆಸೇಜ್‌ ನಲ್ಲಿ “ನಿಮ್ಮ ಮನೆಯಿಂದ 60 ಕಿಮೀ ದೂರದೊಳಗೆ ಯಾವುದೇ ಟೋಲ್ ಬೂತ್ ಇದ್ದರೂ ಆ ಬೂತಲ್ಲಿ ಟೋಲ್ ಫೀ ಕಟ್ಟುವಂತಿಲ್ಲ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಪಾಸ್ ಮಾಡಿಸಿ ಕೊಳ್ಳತಕ್ಕದ್ದು. ಇದನ್ನು ಹೆಚ್ಚು ಫಾರ್ವರ್ಡ್ ಮಾಡಿ ಜನರಿಗೆ ತಿಳಿಸುವ ಕೆಲಸ ಮಾಡಿ. ಇದು ಕೇಂದ್ರ ಸರಕಾರದ ಆಜ್ಞೆ. ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ವಾಟ್ಸಾಪ್‌ ಹೇಳಿಕೆ

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನುಪರಿಶೀಲಿಸಲು ಗೈಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 0.36 ಸೆಕೆಂಡಿನ ವಿಡಿಯೋದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಲೋಕಸಭೆಯಲ್ಲಿ ಹೇಳಿದ್ದರ ವಿಚಾರ ಹೀಗಿದೆ “ಸ್ಥಳೀಯ ಜನರು ಅವರ ಆಧಾರ್ ಕಾರ್ಡ್ ತೋರಿಸಿದರೆ ಪಾಸ್ ನೀಡಲಾಗುವುದು. ಎರಡನೆಯ ವಿಷಯವೆಂದರೆ 60 ಕಿಮೀ ದೂರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ, ಒಂದು ವೇಳೆ ಇದ್ದರೆ ಅದು ಕಾನೂನು ಬಾಹಿರವಾಗಿದೆ ಮತ್ತು ಅದನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ತೆಗೆದುಹಾಕಲಾಗುವುದು.” ಎಂದು ಹೇಳುತ್ತಾರೆ.

ಇದರ ಆಧಾರದಲ್ಲಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಮಾರ್ಚ್ 22, 2022ರಂದು ಡೆಕ್ಕನ್ ಹೆರಾಲ್ಡ್ ಪ್ರಕಟಿಸಿದ ವರದಿಯಲ್ಲಿ,  “ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಸ್ಪರ 60 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ಮುಂದಿನ ಮೂರು ತಿಂಗಳಲ್ಲಿ ತೆಗೆದುಹಾಕಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಘೋಷಿಸಿದ್ದಾರೆ.” ಎಂದಿದೆ. ಇದೇ ವರದಿಯಲ್ಲಿ “ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕಾಗಿ ಟೋಲ್ ಪ್ಲಾಜಾಗಳ ಬಳಿ ಇರುವ ಸ್ಥಳೀಯ ನಿವಾಸಿಗಳಿಗೆ ಅವರ ಆಧಾರ್ ಕಾರ್ಡ್ ವಿಳಾಸವನ್ನು ಆಧರಿಸಿ ಸರ್ಕಾರ ಉಚಿತ ಪಾಸ್‌ಗಳನ್ನು ನೀಡುತ್ತದೆ ಎಂದು ಗಡ್ಕರಿ ಹೇಳಿದರು. ಲೋಕಸಭೆಯಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳ ಹಂಚಿಕೆ ಕುರಿತ ಚರ್ಚೆಗೆ ಉತ್ತರಿಸಿದರು” ಎಂದಿದೆ.

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ಡೆಕ್ಕನ್‌ ಹೆರಾಲ್ಡ್ ವರದಿ

ಮಾರ್ಚ್ 22, 2023ರ ದಿ ಹಿಂದೂ ವರದಿಯಲ್ಲಿ, “ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ ದೂರಕ್ಕೆ ಒಂದೇ ಟೋಲ್ ಪ್ಲಾಜಾ ಇರಲಿದ್ದು, ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳಿದ್ದರೆ ಮುಂದಿನ ಮೂರು ತಿಂಗಳಲ್ಲಿ ಅಂತಹವುಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ.” ಎಂದಿದೆ.

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ದಿ ಹಿಂದೂ ವರದಿ

ಇದೇ ರೀತಿಯ ಸುದ್ದಿಯನ್ನು ಮಾರ್ಚ್ 22, 2022ರಂದು ಎಎನ್‌ಐ ಟ್ವೀಟ್ ಮಾಡಿರುವುದು ಲಭ್ಯವಾಗಿದೆ. ಇದರಲ್ಲಿ “ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯರಿಗೆ ನಾವು ಆಧಾರ್ ಕಾರ್ಡ್ ಮೂಲಕ ಪಾಸ್‌ಗಳನ್ನು ಒದಗಿಸುತ್ತೇವೆ. ಇದಲ್ಲದೆ, 60 ಕಿಮೀ ವ್ಯಾಪ್ತಿಯಲ್ಲಿ ಕೇವಲ ಒಂದೇ ಟೋಲ್ ಪ್ಲಾಜಾ ಇರುವುದನ್ನು ಖಚಿತಪಡಿಸಲಾಗುವುದು. ಅಲ್ಲಿ 2 ನೇ ಟೋಲ್ ಪ್ಲಾಜಾ ಇದ್ದರೆ, ಮುಂದಿನ 3 ತಿಂಗಳಲ್ಲಿ ಅದನ್ನು ಮುಚ್ಚಲಾಗುವುದು: ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿಇಲ್ಲಿಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಚಿವ ನಿತಿನ್‌ ಗಡ್ಕರಿಯವರು ಟೋಲ್‌ ವ್ಯಾಪ್ತಿಯ ಸ್ಥಳೀಯರಿಗೆ ಆಧಾರ್ ಮೂಲಕ ಉಚಿತ ಪಾಸ್ ಮತ್ತು 60 ಕಿ.ಮೀ. ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಗಳು ಇರುವಂತಿಲ್ಲ ಎಂದು ಹೇಳಿದ್ದಾರೆ. ಇದು ವೈರಲ್‌ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೆ ವೀಡಿಯೋ ಜೊತೆಗೆ ಹಂಚಿಕೊಳ್ಳಲಾದ ಹೇಳಿಕೆಯಲ್ಲಿ ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಹೇಳಿರುವುದು ಸುಳ್ಳು ಪ್ರತಿಪಾದನೆಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ರಫ್ತು ಮಾಡಲಾಗ್ತಿದೆ ಎಂದು ಸುಳ್ಳು ಸುದ್ದಿ ಮಾಡಿದ ಟಿ ವಿ ವಿಕ್ರಮ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೂ ನೀವು ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದ್ರಾ ನಿತಿನ್‌ ಗಡ್ಕರಿ ? ಈ ಸ್ಟೋರಿ ಓದಿ

  • July 29, 2024 at 7:43 pm
    Permalink

    ಪಾಸ್ ಎಂದಷ್ಟೇ ಹೇಳಿದ್ದಾರೆ. ಉಚಿತ ಎಂದಿಲ್ಲ.

    Reply

Leave a Reply

Your email address will not be published.

Verified by MonsterInsights