FACT CHECK | ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ರಫ್ತು ಮಾಡಲಾಗ್ತಿದೆ ಎಂದು ಸುಳ್ಳು ಸುದ್ದಿ ಮಾಡಿದ ಟಿ ವಿ ವಿಕ್ರಮ

‘ನಾಯಿ ಮಾಂಸವನ್ನು ರೈಲಿನ ಮೂಲಕ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ನೇತೃತ್ವದ ಗುಂಪೊಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಏನಿದು ಪ್ರಕರಣ; ಜುಲೈ 26ರಂದು ರಾಜಸ್ಥಾನದಿಂದ ಬೆಂಗಳೂರಿನ ಮಾಂಸದ ವ್ಯಾಪಾರಿ ರಜಾಕ್ ಎಂಬುವರು ರೈಲಿನ ಮೂಲಕ ತಂದ ಮಾಂಸದ ಬ್ಯಾಗನ್​ನಲ್ಲಿ ನಾಯಿ ಮಾಂಸ ಕಲಬೆರಕೆ ಆಗಿದೆ ಎಂದು ಹಿಂದೂ ಸಂ​ಘಟನೆಯ ಪುನೀತ್​ ಕೆರೆಹಹಳ್ಳಿ ಆರೋಪಿಸಿ, ರೈಲು ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಆಗ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಕೆರೆಹಳ್ಳಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಮತ್ತು‌ ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪಡೆದಿದ್ದರು. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು‌ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು.

‘ನಗರಕ್ಕೆ ಬಂದ ಜೈಪುರ–ಮೈಸೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ 120 ಬಾಕ್ಸ್‌ಗಳಲ್ಲಿ 4,500 ಕೆ.ಜಿಯಷ್ಟು ನಾಯಿಯ ಮಾಂಸ ತರಲಾಗಿದೆ. ಇದನ್ನು ಅಬ್ದುಲ್ ರಜಾಕ್ ಮಾಲೀಕತ್ವದ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ನೂರಾರು ಬಾಕ್ಸ್‌ನಲ್ಲಿ ಮಾಂಸ ತರಲಾಗುತ್ತಿದೆ’ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿದರು.

ಈ ಆರೋಪವನ್ನೆ ಆಧಾರವಾಗಿಟ್ಟುಕೊಂಡು ಟಿವಿ ವಿಕ್ರಮ ಎಂಬ ಬಲಪಂಥೀಯ ಪ್ರತಿಪಾದಕ ಮಾಧ್ಯಮ ಮುಸ್ಲಿಂ ವ್ಯಾಪಾರಿಗಳು ಹಿಂದೂಗಳಿಗೆ ನಾಯಿ ಮಾಂಸ ತಿನ್ನಿಸುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂಬ ಕೋಮು ದ್ವೇಷದ ನಿರೂಪಣೆಯೊಂದಿಗೆ ಕಾರ್ಯಕ್ರಮ ರೂಪಿಸುವುದಲ್ಲದೆ, ಮುಸ್ಲಿಮರೇ ಈ ಕೃತ್ಯದ ವಿರುದ್ದ ದನಿ ಎತ್ತಿದ್ದಾರೆ ಎಂದು ಪ್ರಸಾರ ಮಾಡಲಾಗಿದೆ. ಈ ವಿಡಿಯೋ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಮುಂದುವರೆದು ಟಿವಿ ವಿಕ್ರಮ ನಿರೂಪಕಿ ಹೀಗೆ ಹೇಳುತ್ತಾರೆ, ಇಲ್ಲಿವರೆಗೆ ರಾಜ್ಯದಲ್ಲಿ ಗೋವುಗಳು ಮಾತ್ರ ಸೇಫ್ ಅಲ್ಲ ಎಂದು ಹೇಳಲಾಗುತ್ತಿತ್ತು, ಆದರೆ ಈಗ ನಾಯಿಗಳಿಗೂ  ಸೇಫ್ ಇಲ್ಲ. ಬೀದಿ ನಾಯಿಗಳು ಖಾಲಿಯಾದ ಮೇಲೆ ಅಬ್ದುಲ್ ರಜಾಕ್ ಆಂಡ್ ಗ್ಯಾಂಗ್ ಮನೆಯಲ್ಲಿ ಸಾಕು ನಾಯಿಗಳನ್ನು ಕದ್ದು ನಾಯಿ ಮಾಂಸ ಮಾರಾಟ ಮಾಡಬಹುದು ಎಂದು ನಿರೂಪಕಿ ಹೇಳುವುದನ್ನು ಕೇಳಬಹುದು.

ಹಾಗಿದ್ದರೆ ಟಿವಿ ವಿಕ್ರಮ ನಿರೂಪಕಿ ಆರೋಪಿಸಿದಂತೆ ಪುನಿತ್ ಕೆರೆಹಳ್ಳಿ ಆಂಡ್ ಟೀಮ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ  ದಾಳಿ ಮಾಡಿ ಗಲಾಟೆ ಮಾಡಿದ ವೇಳೆ ಸಿಕ್ಕ ಬಾಕ್ಸ್‌ಗಳಲ್ಲಿ ಇದ್ದದ್ದು ನಾಯಿ ಮಾಂಸ ಎಂಬುದು ನಿಜವೇ? ಅದು ಹೇಗೆ ಪ್ರಯೋಗಾಲಯದಲ್ಲಿ ಮಾಂಸವನ್ನು ಪರಿಶೀಲಿಸದೆ ಏಕಾಏಕಿ ನಾಯಿ ಮಾಂಸ ಎಂದು ಟಿವಿ ವಿಕ್ರಮ ಚಾನೆಲ್‌ನವರು ಈ ತೀರ್ಮಾನಕ್ಕೆ ಬಂದರು ಎಂದು ಪ್ರಶ್ನಿಸಬೇಕಾಗಿದೆ.

ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ

ಯಾರೋ ಹೋಗಿ ನಾಯಿ ಮಾಂಸ ತಂದಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂದು ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಿ ಮಾಂಸ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಂಸದ ವ್ಯಾಪಾರಿ ರಾಜಸ್ಥಾನದಿಂದ ಪ್ರತಿ ವಾರಕ್ಕೆ, 15 ದಿನಗಳಿಗೊಮ್ಮೆ ಅಥವಾ ಬೇಕಾದ ಸಂದರ್ಭದಲ್ಲಿ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಅನಾವಶ್ಯಕವಾಗಿ ಏನೇನೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಟಿವಿ ವಿಕ್ರಮ ಮಾಧ್ಯಮದ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ !

ಈಗ ರಾಜ್ಯದ ಗೃಹ ಸಚಿವರೇ ಹೇಳಿರುವಂತೆ ಪ್ರಯೋಗಾಲಯದಿಂದ ಬಂದಿರುವ ವರದಿಯಲ್ಲಿ ರಾಜಸ್ಥಾನದಿಂದ ಬಂದಿರುವುದು ನಾಯಿ ಮಾಂಸವಲ್ಲ ಮೇಕೆ ಮಾಂಸ ಎಂದು ದೃಢಪಟ್ಟಿದೆ. ಹಾಗಾದರೆ ಟಿವಿ ವಿಕ್ರಮ ತಂಡ ಹೀಗೆ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಹಿಂದಿನ ಉದ್ದೇಶವಾದರೂ ಏನು? ಇವರ ಮೇಲೆ ಯಾವುದೇ ಕ್ರಮವಿಲ್ಲವೇ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೊಹರಂ ಮೆರವಣಿಗೆಯಲ್ಲಿ ಮುಸ್ಲಿಮರು ಕುದುರೆಯನ್ನು ಗಾಯಗೊಳಿಸಿದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights