FACT CHECK | ಮೊಹರಂ ಮೆರವಣಿಗೆಯಲ್ಲಿ ಮುಸ್ಲಿಮರು ಕುದುರೆಯನ್ನು ಗಾಯಗೊಳಿಸಿದರೇ?
ಮುಸ್ಲಿಮರು ಮೊಹರಂ ಸಮಯದಲ್ಲಿ ಕುದುರೆಯನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲು ಗಾಯಗೊಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಅಮಿತ್ ಲೆಲಿ ಸ್ಲೇಯರ್ (ಬಾಯಿಲ್ಡ್ ಅಂಡಾ) ಎಂಬ ಎಕ್ಸ್ ಬಳಕೆದಾರರು ಜುಲೈ 18, 2024 ರಂದು ಈ ವಿಡಿಯೋವನ್ನು ಹಂಚಿಕೊಂಡು, “ಈ ವರ್ಷ, ಮುಂಬೈನ ಬೀದಿಗಳಲ್ಲಿ, ಮುಸ್ಲಿಮರು ಕ್ರೌರ್ಯ, ಮುಗ್ಧ ಕುದುರೆಯನ್ನು ತೆಗೆದುಕೊಂಡು, ಅದನ್ನು ಚಾಕುವಿನಿಂದ ಗಾಯ ಮಾಡಿ ಕತ್ತರಿಸಿದ್ದಾರೆ. ಪ್ರವಾದಿಯವರ ಮೊಮ್ಮಗನ ಮರಣದ ಸ್ಮರಣಾರ್ಥವಾಗಿ, ಗಾಯಗೊಂಡ ಪ್ರಾಣಿಯನ್ನು ಮೆರವಣಿಗೆ ಮಾಡುತ್ತಿದ್ದಾರೆ,” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ 35 ಲಕ್ಕಕ್ಕೂ ಹೆಚ್ಚಿನ ವೀವ್ಸ್ ಮತ್ತು 6000 ಕ್ಕೂ ಅಧಿಕ ಲೈಕ್ಸ್ ಬಂದಿದೆ.
ಇದೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಾಣಿಯನ್ನು ಗಾಯಗೊಳಿಸಲು ಚಾಕು ಮತ್ತು ಬ್ಲೇಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು. ಇದೇ ರೀತಿಯ ಅನೇಕ ಪೋಸ್ಟ್‌ಗಳು ಅಪ್ಲೋಡ್ ಆಗಿವೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮುಸ್ಲಿಮರು ಕುದುರೆಯನ್ನು ಚಾಕುವಿನಿಂದ ಗಾಯ ಮಾಡಿ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಅಶುರಾ ಮೊಹರಂನ ಹತ್ತನೇ ದಿನವಾಗಿದೆ. ಇದು ಕರ್ಬಲಾ ಕದನದಲ್ಲಿ ಇಮಾಮ್ ಹುಸೇನ್ ಅವರ ಮರಣದ ನೆನಪಿಗಾಗಿ ಆಚರಿಸಲಾಗುತ್ತದೆ. ಅಶುರಾ ದಿನದಂದು, ಶಿಯಾ ಮುಸ್ಲಿಮರು ಕರ್ಬಲಾ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಇಮಾಮ್ ಹುಸೇನ್ ಅವರ ಕುದುರೆಯ ಗೌರವಾರ್ಥವಾಗಿ ಕುದುರೆಯನ್ನು ಮೆರವಣಿಗೆ ಮಾಡುತ್ತಾರೆ
ಆದರೆ, ವೈರಲ್ ಆಗುತ್ತಿರುವ ಸುದ್ದಿಯಂತೆ ಇಲ್ಲಿ ಕುದುರೆಯನ್ನು ಚಾಕುವಿನಿಂದ ಗಾಯ ಮಾಡಲಾಗಿಲ್ಲ. ಬದಲಾಗಿ ಮೆರವಣಿಗೆ ವೇಳೆ ಸ್ಥಳದಲ್ಲಿದ್ದವರು ಕುದುರೆಗೆ ಬಣ್ಣ ಬಳಿದಿದ್ದಾರೆ. ಈ ಕುರಿತು 17 ಜುಲೈ, 2024 ರಂದು ಷಿಯಾ ಏಜೆನ್ಸಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕುದುರೆಗೆ ಬಣ್ಣ ಬಳಿಯುತ್ತಿರುವುದು ಸೆರೆಯಾಗಿದೆ.
ಹಾಗೆಯೆ ಮೆರವಣಿಗೆ ವೇಳೆ ಕುದುರೆಯ ಜೊತೆ ಇರುವ ಅದೇ ವ್ಯಕ್ತಿ ಯೂಟ್ಯೂಬ್ನಲ್ಲಿರುವ ವೀಡಿಯೊದಲ್ಲಿ ಕುದುರೆಗೆ ಬಣ್ಣ ಹಾಕುತ್ತಿದ್ದಾರೆ.
ಈ ಬಗ್ಗೆ PETA ಇಂಡಿಯಾದ ಮ್ಯಾನೇಜರ್ ಮೀಟ್ ಅಶರ್ ಅವರು ಸ್ಪಷ್ಟನೆ ನೀಡಿದ್ದು, ”ಅವರು ಕುದುರೆಗೆ ಯಾವುದೇ ರೀತಿಯ ಹಾನಿ ಮಾಡಿಲ್ಲ. ಆದರೆ, ಮೆರವಣಿಗೆಯಲ್ಲಿ ಯಾವುದೇ ಪ್ರಾಣಿ ಬಳಸುವುದನ್ನು ನಾವು ವಿರೋಧಿಸುತ್ತೇವೆ. ಕುದುರೆಗೆ ಬಣ್ಣ ಬಳಿಯಲಾಗಿದೆ. ಇದು ಅತ್ಯಂತ ಆಕ್ಷೇಪಾರ್ಹವಾಗಿದೆ,” ಎಂದು ವಿಸ್ತಾರವಾಗಿ ಬರೆದುಕೊಂಡಿದ್ದಾರೆ.
This year, in the streets of Mumbai, Muslîms take a terrified, innocent horse, repeatedly slàsh it with a knîfe, and parade the bl00died, injured animal around to commemorate the death of the Prophet’s grandson.
Hello @PetaIndia @peta any comments
— Boiled Anda (@AmitLeliSlayer) July 18, 2024
ಹಾಗೆಯೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಸಿರು ಬಣ್ಣದ ಕಟ್ಟಡದ ಪಕ್ಕದಲ್ಲಿ ಹಜ್ರತ್ ಇಮಾಮ್ ಮತ್ತು ಡೋಂಗ್ರಿ ಪೊಲೀಸ್ ಎಂದು ಬರೆದಿರುವ ಬೋರ್ಡ್ ಕಾಣಿಸುತ್ತದೆ. ಇದನ್ನು ಗೂಗಲ್ ಸರ್ಚ್ನಲ್ಲಿ ಹುಡುಕಿದಾಗ ಹಜ್ರತ್ ಇಮಾಮ್ ಹುಸೈನ್ ಚೌಕ್ ಡೋಂಗ್ರಿ ಪೊಲೀಸ್ ಸ್ಟೇಷನ್ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನಷ್ಟು ಖಚಿತತೆಗಾಗಿ ನಾವು ಗೂಗಲ್ ಮ್ಯಾಪ್ನಲ್ಲಿ ‘ಹಜ್ರತ್ ಇಮಾಮ್ ಹುಸೈನ್ ಚೌಕ್ ಡೋಂಗ್ರಿ ಪೊಲೀಸ್ ಸ್ಟೇಷನ್’ ಎಂದು ಲೊಕೇಷನ್ ಹಾಕಿ ಸ್ಟ್ರೀಟ್ ವೀವ್ ತೆರೆದು ನೋಡಿದಾಗಸ್ಪಷ್ಟವಾಗಿ ಗೋಚರಿಸಿದೆ. ವೈರಲ್ ವೀಡಿಯೊದ ಹಿಂಬದಿಯಲ್ಲಿ ಕಂಡುಬರುವ ಹಸಿರು ಬಣ್ಣದ ಕಟ್ಟಡವು ಸುನ್ನಿ ಶಾಫಿ ಮಸೀದಿಯಾಗಿದೆ. ಹಾಗೆಯೆ ಮಸೀದಿಯ ಪಕ್ಕದಲ್ಲಿರುವುದು ಡೋಂಗ್ರಿ ಪೊಲೀಸ್ ಠಾಣೆ ಆಗಿದೆ.
ಇದು ಮುಂಬೈನ ಡೋಂಗ್ರಿಯ ಹಜ್ರತ್ ಇಮಾಮ್ ಹುಸೇನ್ ಚೌಕ್‌ನಲ್ಲಿ ನಡೆದ ಘಟನೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋಗೆ ನೀಡಿರುವ ಶೀರ್ಷಿಕೆಯಂತೆ ಮುಂಬೈನ ಡೋಂಗ್ರಿಯಲ್ಲಿ ನಡೆದ ಅಶುರಾ ಮೆರವಣಿಗೆ ವೇಳೆ ಕುದುರೆಯ ದೇಹದ ಮೇಲೆ ಯಾವುದೇ ಗಾಯಗಳನ್ನು ಮಾಡಲಾಗಿಲ್ಲ. ಕುದುರೆಗೆ ಬಣ್ಣ ಬಳಿದಿರುವುದರಿಂದ ಆರೀತಿ ಕಾಣುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದಲ್ಲಿ ರಸ್ತೆಯಲ್ಲೆ ನಮಾಜ್ ಮಾಡುತ್ತಿದ್ದ ಕಾರಣಕ್ಕೆ ಮುಸ್ಲಿಂ ಧರ್ಮಗುರುಗಳನ್ನು ಬಂಧಿಸಿದ್ದು ನಿಜವೇ?