FACT CHECK | ರೈಲು ಹಳಿತಪ್ಪಿ ಅಪಘಾತವಾಗುವಂತೆ ಮಾಡುವ ಉದ್ದೇಶದಿಂದ ಮುಸ್ಲಿಮರು ಈ ಕೃತ್ಯ ಎಸಗಿದ್ರಾ ? ಈ ಸ್ಟೋರಿ ಓದಿ

ರೈಲ್ವೇ ಹಳಿ ಮೇಲೆ ಕಲ್ಲು ಇಟ್ಟು ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಕೆಲವು ರೈಲ್ವೆ ಟ್ರ್ಯಾಕ್‌ಮೆನ್‌ಗಳು ವಿಚಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲ ಮುಸ್ಲಿಂ ಸಮುದಾಯವು ತಮ್ಮ ಮಕ್ಕಳನ್ನು ರೈಲು ಹಳಿತಪ್ಪಿಸಲು ಬಳಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ.

ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 9, 2024 ರಂದು ಈ ವೀಡಿಯೊ ಅಪ್ಲೋಡ್ ಆಗಿದೆ. ‘ಜಿಹಾದಿಗಳು ತಮ್ಮ ಮಕ್ಕಳನ್ನು ಬಳಸಿಕೊಂಡು ಈ ರೀತಿ ಕೆಟ್ಟ ಕೆಲಸವನ್ನು ಕರ್ನಾಟಕದಲ್ಲೂ ಶುರು ಮಾಡಿದ್ದಾರೆ. ಇವರ ಸರ್ಕಾರ ಇದ್ದ ಮೇಲೆ ಇವರಿಗೆ ಭಯ ಯಾಕೆ ಹೇಳಿ. ಎಚ್ಚೆತ್ತುಕೊಳ್ಳು ಹಿಂದೂಗಳೇ…’ ಎಂದು ಬರೆದುಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. “ಎಷ್ಟು ರೈಲುಗಳಿಗೆ ಈ ರೀತಿ ಕಲ್ಲು ಇಟ್ಟಿದ್ದೀರಿ? “ಇದೇ ಮೊದಲ ಬಾರಿ ಇಟ್ಟಿದ್ದೀನಿ ಅಂಕಲ್. ನಿಮ್ಮ ಕಾಲಿಗೆ ಬೀಳುತ್ತೇನೆ, ದಯವಿಟ್ಟು ಬಿಟ್ಟು ಬಿಡಿ” ಎಂದು ಅಳುತ್ತಿರುವ ಹುಡುಗನ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರು ವ್ಯಕ್ತಿಗಳು ಬಾಲಕನೋರ್ವನ ಕೈ ಹಿಡಿದುಕೊಂಡು, ಆತನಿಂದ ರೈಲು ಹಳಿ ಮೇಲೆ ಇಟ್ಟಿರುವ ಕಲ್ಲುಗಳನ್ನು ತೆಗೆಸುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

 

 

 

 

 

 

 

 

 

 

 

 

 

 

 

 

 

“ಇದು ತಮಾಷೆಯಲ್ಲ; ಇದು ಗಂಭೀರ ಸಮಸ್ಯೆ!. ದಿನಾಂಕ ಮತ್ತು ಸ್ಥಳ ತಿಳಿದಿಲ್ಲ. ಆದರೆ, ಇಂತಹ ವಿಡಿಯೋಗಳು ಬಹುತೇಕ ಪ್ರತಿದಿನ ಹೊರ ಬರುತ್ತಿವೆ. ರೈಲು ಹಳಿತಪ್ಪಿ ಅಪಘಾತವಾಗುವಂತೆ ಮಾಡುವ ಉದ್ದೇಶದಿಂದ ಇಂತಹ ಕೆಲಸಗಳನ್ನು ಮಾಡಲು ಅವರಿಗೆ ಕಲಿಸಲಾಗುತ್ತಿದೆಯೇ?” ಎಂದು ಬಲಪಂಥೀಯ ಎಕ್ಸ್ ಬಳಕೆದಾರ ರೌಶನ್ ಸಿಹ್ಹಾ ಅಥವಾ ಮಿ.ಸಿನ್ಹಾ ಬರೆದು ಹಂಚಿಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

ಮತ್ತೋರ್ವ ಬಲ ಪಂಥೀಯ ಎಕ್ಸ್ ಬಳಕೆದಾರ ದೀಪಕ್ ಶರ್ಮಾ (@SonOfBharat7)ಸೆಪ್ಟೆಂಬರ್ 6, 2024ರಂದು ವಿಡಿಯೋ ಹಂಚಿಕೊಂಡು ” ಹಿಂದೂಗಳೇ ನಿಮ್ಮನ್ನು ಕೊಲ್ಲಲು ನರಭಕ್ಷಕ ಜಿಹಾದಿಗಳ ಮಗು ಸಿದ್ದವಾಗಿದೆ. ನಿಮ್ಮ ಪ್ರೀತಿ ಪಾತ್ರರ ಮೃತದೇಹಗಳನ್ನು ನಿಮ್ಮ ನಾಲ್ಕು ಭುಜಗಳ ಮೇಲೆ ಹೊತ್ತುಕೊಂಡು ಹೋಗುತ್ತೀರಿ. ಈ ವಿಡಿಯೋ ಕರ್ನಾಟಕದದ್ದು ಎನ್ನಲಾಗಿದೆ. ಎಕ್ಸ್ ಪ್ರೆಸ್ ರೈಲು ಪಲ್ಟಿಯಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೊಂದು ಸುದ್ದಿ ಬರುವ ದಿನ ದೂರವಿಲ್ಲ. ಎಚ್ಚರಿಕೆ” ಎಂದು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದರು.

 

 

 

 

 

 

 

 

 

 

 

 

 

 

 

 

 

 

ಕೋಮು ದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಫ್ರಂಟಲ್ ಪೋರ್ಸ್ (@FrontalForce) ಎಂಬ ಇನ್ನೊಂದು ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 7ರಂದು ವಿಡಿಯೋ ಹಂಚಿಕೊಂಡು “ಬ್ರೇಕಿಂಗ್, ರೈಲು ಅಪಘಾತ ಉಂಟು ಮಾಡಲು ರೈಲು ಹಳಿಗಳ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ಇಟ್ಟು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಮೂಲಭೂತವಾದಿ ಎಂದು ಬರೆದುಕೊಂಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡವರಲ್ಲಿ ಕೆಲವರು ‘ಮುಸ್ಲಿಂ ಹುಡುಗ’ ರೈಲು ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಸಿಕ್ಕಿ ಬಿದ್ದಿದ್ದಾನೆ ಎಂದು ನೇರವಾಗಿ ಬರೆದುಕೊಂಡರೆ, ಇನ್ನೂ ಕೆಲವರು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ವೈರಲ್ ಆಗಿರುವ ವಿಡಿಯೋ ಕರ್ನಾಟಕದ ಕಲಬುರಗಿ ಜಿಲ್ಲೆಯದ್ದು ಮತ್ತು 2018ರಲ್ಲಿ ನಡೆದ ಘಟನೆಯದ್ದು ಅಂದರೆ ಆರು ವರ್ಷ ಹಳೆಯದ್ದಾಗಿದೆ.

ಕಲಬುರಗಿ ಕೇಂದ್ರ ರೈಲು ನಿಲ್ದಾಣದಿಂದ ಹಿರೇನಂದೂರು ಕಡೆಗೆ ಸುಮಾರು 2 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವ ಬಾಲಕ ಪಕ್ಕದ ಕೊಳಗೇರಿಯ ನಿವಾಸಿಯಾಗಿದ್ದು, ಅವನ ಸ್ನೇಹಿತರೊಂದಿಗೆ ಆಟವಾಡುತ್ತಾ ರೈಲು ಹಳಿ ಮೇಲೆ ಕಲ್ಲುಗಳನ್ನು ಜೋಡಿಸಿದ್ದಾರೆ. ಅವರಿಗೆ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಘಾತ ಉಂಟು ಮಾಡುವ ಯಾವುದೇ ಉದ್ದೇಶ ಇರಲಿಲ್ಲ.

ಮಕ್ಕಳು ರೈಲು ಹಳಿಗಳ ಮೇಲೆ ಕಲ್ಲು ಇಟ್ಟಿರುವುದನ್ನು ಗಮನಿಸಿದ ಟ್ರ್ಯಾಕ್‌ಮೆನ್‌ಗಳಾದ ಗೋಪಾಲ್, ರಾಜ್‌ಕುಮಾರ್ ಮತ್ತು ರಾಜು ಬಾಲಕನೋರ್ವನನ್ನು ಹಿಡಿದು ಕಲ್ಲುಗಳನ್ನು ತೆಗೆಸಿದ್ದರು.

ಈ ಘಟನೆಯ ವಿಡಿಯೋ 2018ರ ಬಳಿಕ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮುಸ್ಲಿಂ ಬಾಲಕರು ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅಸಲಿಗೆ ರೈಲು ಹಳಿಗೆ ಕಲ್ಲುಗಳನ್ನು ಇಟ್ಟ ಬಾಲಕ ಹಿಂದೂ ಧರ್ಮದವನಾಗಿದ್ದಾನೆ.

ಇಲ್ಲಿ ಬಾಲಕನ ಧರ್ಮವನ್ನು ಹೇಳುವ ಅಗತ್ಯವಿಲ್ಲ. ಆದರೆ, ಇತ್ತೀಚಿಗೆ ಯಾವುದೇ ರೈಲು ಹಳಿಗಳ ಮೇಲೆ ಯಾವುದೇ ವಸ್ತುಗಳನ್ನು ಇಟ್ಟಿರುವುದು ಕಂಡು ಬಂದರೆ ಅಥವಾ ನೂತನ ವಂದೇ ಭಾರತ್ ರೈಲಿಗೆ ಯಾರಾದರು ಕಲ್ಲು ಎಸೆದರೆ, ಅದನ್ನು ಮುಸ್ಲಿಮರೇ ಮಾಡಿದ್ದಾರೆ ಎಂದು ಹೇಳುವುದು ಕೆಲವರಿಗೆ ವಾಡಿಕೆಯಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯವನ್ನು ದೇಶ ವಿರೋಧಿಗಳ ರೀತಿ ಬಿಂಬಿಸಲಾಗುತ್ತಿದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ರೈಲು ಹಳಿಯೊಂದರಿಂದ ಮಕ್ಕಳು ಕಬ್ಬಿಣದ ವಸ್ತುಗಳನ್ನು ಕಳವು ಮಾಡಿದ ಘಟನೆಯನ್ನು ಭಾರತದಲ್ಲಿ ರೈಲು ಅಪಘಾತ ಉಂಟು ಮಾಡಲು ಮುಸ್ಲಿಂ ಮಕ್ಕಳು ರೈಲು ಹಳಿಗೆ ಹಾನಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆಲ್ಟ್‌ ನ್ಯೂಸ್ ಸುದ್ದಿ ಬರೆಯುವ ವೇಳೆ, ರಾಯಚೂರು ರೈಲ್ವೆಯ ವೃತ್ತ ನಿರೀಕ್ಷಕ ರವಿಕುಮಾರ್ ಅವರನ್ನು ಸಂಪರ್ಕಿಸಿತ್ತು. ಅವರು ಕಲಬುರಗಿಯಲ್ಲಿ ಮಕ್ಕಳು ಆಟವಾಡುತ್ತಾ ರೈಲು ಹಳಿ ಮೇಲೆ ಕಲ್ಲು ಇಟ್ಟಿರುವುದನ್ನು ಖಚಿತಪಡಿಸಿದ್ದರು.

ಇದನ್ನೆ (ಸೆ.8, 2024) ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು ಎಕ್ಸ್‌ನ ಪೋಸ್ಟ್‌ನಲ್ಲಿ ಕಲಬುರಗಿಯ ಹಳೆಯ ವಿಡಿಯೋಗೆ ಬಲಪಂಥೀಯರು ಕೋಮು ಬಣ್ಣ ಬಳಿದಿರುವುದನ್ನು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಲಬುರಗಿಯಲ್ಲಿ 6 ವರ್ಷಗಳ ಹಿಂದೆ ನಡೆದ ಘಟನೆಯೊಂದರ ವಿಡಿಯೋವನ್ನು ಈಗ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತೀಯ ಸೇನೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋ ವಾಹನಗಳ ಖರೀದಿಗೆ ರತನ್ ಟಾಟಾ ದೇಣಿಗೆ ನೀಡಿದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights