FACT CHECK | ಫಾರ್ಮಾಲಿನ್ ಮಾತ್ರೆಯನ್ನು ಬೆರೆಸಿದ ಮೀನುಗಳನ್ನು ಮುಸ್ಲಿಮರು ಮಾತ್ರ ಮಾರಾಟ ಮಾಡುತ್ತಿದ್ದಾರೆ ಎಂಬ ನಿರೂಪಣೆ ಸುಳ್ಳು
ಈ ವಿಡಿಯೋದಲ್ಲಿ ನೋಡಿ ಮೀನಿಗೆ ಮುಸಲ್ಮಾನರು ಮಾತ್ರೆಯೊಂದನ್ನು ಸೇರಿಸಿ, ಅದು ಕರಗುವಂತೆ ಮಾಡಿ, ತದನಂತರ ಮಾರಾಟ ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಮುಸಲ್ಮಾನರ ಅಂಗಡಿಯಲ್ಲಿ ಮೀನು ಮತ್ತು ಮಾಂಸವನ್ನು ಖರೀದಿಸಬೇಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಮುಸಲ್ಮಾನರ ಅಂಗಡಿಗಳಲ್ಲಿ ವ್ಯಾಪಾರ ಮಾಡುವಾಗ ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ ಹಿಂದುಗಳೇ ಎಚ್ಚರ. ಮುಸಲ್ಮಾನರ ಅಂಗಡಿಯಲ್ಲಿ ಮೀನು ಮಾಂಸಗಳನ್ನು ಖರೀದಿಸುವ ಮುನ್ನ ಹಿಂದುಗಳೇ ಎಚ್ಚರ ಎಚ್ಚರ ಎಂಬ ಹೇಳಿಕೆಯೊಂದಿಗೆ ಎಕ್ಸ್ಖಾತೆ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಪೊಲೀಸರು ಮೀನು ವ್ಯಾಪಾರಿಗಳ ಅಂಗಡಿಗಳಿಗೆ ದಾಳಿ ನಡೆಸಿ, ಮೀನುಗಳ ಒಳಗಿದ್ದ ಮಾತ್ರೆಗಳನ್ನು ಪರಿಶೀಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 8 ಸೆಪ್ಟೆಂಬರ್ 2024ರಂದು ಇಂಟರ್ನ್ಯಾಷನಲ್ ಬಿಜಿನೆಸ್ ಟೈಮ್ಸ್ ಸುದ್ದಿ ತಾಣದಲ್ಲಿ ಹಂಚಿಕೊಂಡಿದ್ದ ವರದಿಯೊಂದು ಲಭ್ಯವಾಗಿದೆ.

ಈ ವರದಿಯನ್ನು ಪರಿಶೀಲಿಸಿದಾಗ ಫಾರ್ಮಾಲಿನ್ ಮಾತ್ರೆಗಳನ್ನು ಬೆರೆಸಿದ ಮೀನು ಮಾರಾಟ ಜಾಲದ ಕುರಿತು ಸಂಪೂರ್ಣವಾಗಿ ವಿವರಣೆಯನ್ನು ನೀಡಲಾಗಿದೆ. ಫಾರ್ಮಾಲಿನ್ ಮಾತ್ರೆಗಳನ್ನು ಮೀನುಗಳ ಒಳಗೆ ಇರಿಸಲಾಗುತ್ತದೆ. ಅದು ಕರಗಿ ಮೂರು ನಾಲ್ಕು ದಿನಗಳ ಕಾಲ ಮೀನುಗಳು ಹಾಳಾಗದಂತೆ ಇಡಲು ನೆರವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಮೀನುಗಳಲ್ಲಿ ಫಾರ್ಮಾಲಿನ್ ಮಾತ್ರೆಗಳನ್ನು ಇರಿಸುವ ಜಾಲ ದೊಡ್ಡದಾಗಿದ್ದು, 2018ರಲ್ಲಿ ಕೇರಳದಾದ್ಯಂತ ಇಂತಹ ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಯು ಕಂಡುಬಂದಿದೆ.

ಇದರ ಆಧಾರದ ಮೇಲೆ 2018ರಲ್ಲಿ ಕೇರಳದಲ್ಲಿ ಫಾರ್ಮಾಲಿನ್ ಮೀನುಗಳನ್ನು ಪೊಲೀಸರು ವಶಪಡಿಸಿಕೊಂಡ ವರದಿಗಳ ಕುರಿತು ಕೀ ವರ್ಡ್ಗಳನ್ನು ಬಳಸಿ ಪರಿಶೀಲಿಸಿದಾಗ, ಎನ್ಡಿಟಿವಿ, ದ ನ್ಯೂಸ್ ಮಿನಿಟ್, ದ ಹಿಂದೂ, ದ ಇಂಡಿಯನ್ ಎಕ್ಸ್ಪ್ರೆಸ್, ಹಿಂದುಸ್ತಾನ್ ಟೈಮ್ಸ್, ಸೇರಿದಂತೆ ಹಲವು ಮಾಧ್ಯಮಗಳು ಮಾಡಿದ್ದ ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ ವೈರಲ್ ವಿಡಿಯೋದಲ್ಲಿ ಹೇಳಿಕೊಂಡಂತೆ ಮುಸ್ಲಿಮರು ಮಾತ್ರ ಈ ಮಾತ್ರೆಗಳನ್ನು ಬಳಸಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಫಾರ್ಮಾಲಿನ್ ಮಾತ್ರೆಯನ್ನು ಬೆರೆಸಿದ ಮೀನುಗಳನ್ನು ಕೇವಲ ಮುಸಲ್ಮಾನರು ಮಾತ್ರ ಮಾರಾಟ ಮಾಡುತ್ತಿದ್ದಾರೆ ಎಂಬುದು ಸುಳ್ಳು. ಇದೊಂದು ದೊಡ್ಡ ಜಾಲದಂತಿದ್ದು, ಈ ಮಾತ್ರೆಗಳನ್ನು ಬಳಸುತ್ತಿರುವ ವ್ಯಾಪಾರಿಗಳಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಹಾಗಾಗಿ ಮುಸ್ಲಮರನ್ನ ಮಾತ್ರವೇ ಟಾರ್ಗೆಟ್ ಮಾಡಿ ಈ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರೈಲು ಹಳಿತಪ್ಪಿ ಅಪಘಾತವಾಗುವಂತೆ ಮಾಡುವ ಉದ್ದೇಶದಿಂದ ಮುಸ್ಲಿಮರು ಈ ಕೃತ್ಯ ಎಸಗಿದ್ರಾ ? ಈ ಸ್ಟೋರಿ ಓದಿ

