960 ಕಿ.ಮೀ ಕ್ರಮಿಸಿ ಕ್ಯಾನ್ಸರ್ ರೋಗಿಗೆ ಔಷಧ ನೀಡಿ ಮಾನವೀಯತೆ ಮೆರೆದ ಪೇದೆ

ದೇಶಾದ್ಯಂತ ಲಾಕ್‌ಡೌನ್  ಇರುವ ಪರಿಣಾಮ ಕ್ಯಾನ್ಸರ್‌ ರೋಗಿಯೊಬ್ಬರು ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ಪೇದೆಯೊಬ್ಬರು 960 ಕಿ.ಮೀ ಬೈಕ್‌ ಸವಾರಿ ಮಾಡಿ ರೋಗಿದೆ ಔಷಧಿ ತಲುಪಿಸಿ ಮಾನವೀಯತೆ ಮೆರೆದಿದ್ದು ಪ್ರಶಂಶೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಚೇರಿಯ ನಿಯಂತ್ರಣ ಕೊಠಡಿ ಹೆಡ್ ಕಾನ್ಸ್‌ಸ್ಟಬಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಎಸ್.ಕುಮಾರಸ್ವಾಮಿಯವರು ತಮ್ಮ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಿದ್ದು, ಅವರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರವೈ ಹರಿದು ಬರುತ್ತಿದೆ. ಪೊಲೀಸ್ ಆಯುಕ್ತ ಭಾಸಕರ್ ರಾವ್ ಅವರೂ ಕೂಡ ಕುಮಾರಸ್ವಾಮಿಯವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಏ.11 ರಂದು ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಧಾರವಾಡದ ಕ್ಯಾನ್ಸರ್ ಪೀಡಿತ ವ್ಯಕ್ತಿ, ನನಗೆ ಅಗತ್ಯವಿರುವ ಔಷಧವು ಬೆಂಗಳೂರಿನಲ್ಲಿ ಮಾತ್ರ ಸಿಗಲಿದೆ. ಆದರೆ, ಲಾಕ್‌ಡೌನ್‌ ಇರುವ ಕಾರಣದಿಂದಾಗಿ ಔಷಧ ತರಿಸಿಕೊಳ್ಳಲು ಕಷ್ಟವಾಗಿದೆ ಎಂದು ಅವರು ನೋವು ಹೇಳಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ರೋಗಿ ಅಳಲನ್ನು ವೀಕ್ಷಿಸಿದ್ದ ಕುಮಾರಸ್ವಾಮಿಯವರು ಆ ರೋಗಿಗೆ ನೆರವು ನೀಡಲು ಮುಂದಾಗಿದ್ದಾರೆ.   ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಅವರು, ಏ.12 ರಂದು ಬೈಕ್ ನಲ್ಲೇ ಧಾರವಾಡಕ್ಕೆ ತೆರಳಿ ಔಷಧ ತಲುಪಿಸಿ ಬೆಂಗಳೂರಿಗೆ ಮರಳಿದ್ದಾರೆ.

ನಮ್ಮ ಸಂಬಂಧಿಗಳು ಕ್ಯಾನ್ಸರ್ ನಿಂದ ಹಿಂಸೆ ಅನುಭವಿಸಿದ್ದನ್ನು ಹತ್ತಿರದಿಂದ ನೋಡಿದ್ದೇನೆ. ಸುದ್ದಿವಾಹಿನಿಯಲ್ಲಿ ಧಾರವಾಡದ ಕ್ಯಾನ್ಸರ್ ರೋಗಿ, ತನಗೆ ಔಷಧ ದೊರೆಯುತ್ತಿಲ್ಲವೆಂದಾಗ ಮನಸ್ಸಿಗೆ ಸಂಕಟವಾಯಿತು. ಹೇಗಾದರೂ ಮಾಡಿ ಅವರಿಗೆ ಸಹಾಯ ಮಾಡಬೇಕು ಎಂದೆನಿಸಿತು. ಹಾಗಾಗಿ ಆ ಸುದ್ದಿವಾಹಿನಿ ಕಚೇರಿಗೆ ತೆರಳಿ ರೋಗಿಯ ಮೊಬೈಲ್ ಸಂಖ್ಯೆ ಪಡೆದು ಮಾತನಾಡಿದೆ. ಔಷಧಿಗಳ ಡಿಟೈಲ್ಸ್‌ ಪಡೆದುಕೊಂಡೆ. ರೋಗಿಯ ಸಂಬಂಧಿಗಳು ನನ್ನ ಮೆನೆಯ ವಿಳಾಸಕೊಟ್ಟು ಆನ್’ಲೈನ್ ನಲ್ಲಿ ಔಷಧ ಬುಕ್ ಮಾಡಿದ್ದರು. ಅದನ್ನು ಪಡೆದುಕೊಂಡು ಧಾರವಾಡಕ್ಕೆ ತೆರಳು ಔಷಧ ನೀಡಿ ಬಂದೆ ಎಂದು ಪೇದೆ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

ಔಷಧಿ ದೊರೆತ ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರಿನಿಂದ ಬೈಕ್ ನಲ್ಲಿ ಹೊರಟು ಮಧ್ಯಾಹ್ನ 2ಕ್ಕೆ ಧಾರವಾಡ ತಲುಪಿದೆ. ಅಲ್ಲಿನ ಮಣಿನಗರದಲ್ಲಿದ್ದ ರೋಗಿಗೆ ಔಷಧ ತಲುಪಿಸಿದೆ. ಮತ್ತೆ ಸಂಜೆ 4.30ಕ್ಕೆ ಮರು ಪ್ರಯಾಣ ಆರಂಭಿಸಿದೆ. ರಾತ್ರಿ 10.30ಕ್ಕೆ ಚಿತ್ರದುರ್ಗದ ಅಗ್ನಿಶಾಮಕ ದಳ ಠಾಣೆಯಲ್ಲಿ ಕೆಲ ಗಂಟೆ ವಿಶ್ರಾಂತಿ ಪಡೆದೆ. ಮತ್ತೆ ಬೆಳಿಗ್ಗೆ 4.30ಕ್ಕೆ ಬೈಕ್ ಓಡಿಸಿಕೊಂಡು ಬೆಳಿಗ್ಗೆ 10ಕ್ಕೆ ಬೆಂಗಳೂರಿಗೆ ಸೇರಿದೆ. ನಂತರ ಕಚೇರಿಗೆ ತೆರಳಿ ಎಸಿಪಿ ಅವರಿಗೆ ಕರ್ತವ್ಯಕ್ಕೆ ವರದಿ ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights