FACT CHECK | ಇಸ್ಕಾನ್ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಪರ ವಕಾಲತ್ತು ವಹಿಸಿದ ಮುಸ್ಲಿಂ ವಕೀಲನನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡಲಾಗಿದೆಯೇ?
ಕನ್ನಡ ದುನಿಯಾ ಸೇರಿದಂತೆ ಅನೇಕ ಸುದ್ದಿವಾಹಿನಿಗಳು ಹಿಂದೂ ಅರ್ಚಕರ ಪರ ವಾದಿಸುತ್ತಿದ್ದ ವಕೀಲರು ಘರ್ಷಣೆಯಲ್ಲಿ ಕೊಲ್ಲಲ್ಪಟ್ಟರು ಎಂದು ವರದಿ ಮಾಡಿವೆ.
ಮೃತ ವಕೀಲರು ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಾದಿಸುತ್ತಿದ್ದರು ಮತ್ತು ಅವರು ಮುಸ್ಲಿಂ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುದೀರ್ಘ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸಲು ಫೋಟೊದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ ಇದಕ್ಕೆ ಸಂಬಂಧಿಸಿದ ಅನೇಕ ಸುದ್ದಿ ಲಭ್ಯವಾಗಿದೆ.
ಪ್ರಮುಖವಾಗಿ ಬಾಂಗ್ಲಾದೇಶದ ಪ್ರಮುಖ ಸುದ್ದಿ ವೆಬ್ಸೈಟ್ ಪ್ರೋಥೋಮ್ ಅಲೋದಲ್ಲಿ ಪ್ರಕಟವಾದ ನವೆಂಬರ್ 26 ರ ಸುದ್ದಿ ವರದಿಯು ಲಭ್ಯವಾಗಿದೆ. ಇದರಲ್ಲಿ ಮೃತ ವಕೀಲ ಸೈಫುಲ್ ಇಸ್ಲಾಮ್ ಅಲಿಫ್ ಅವರನ್ನು ಸಹಾಯಕ ಸಾರ್ವಜನಿಕ ಅಭಿಯೋಜಕ ಎಂದು ಗುರುತಿಸಿದೆ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ ಇಸ್ಲಾಮ್ ಹತ್ಯೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಬಾಂಗ್ಲಾದೇಶ ಸರ್ಕಾರದ ಫ್ಯಾಕ್ಟ್ ಚೆಕ್ ಸಂಸ್ಥೆ CA ಪ್ರೆಸ್ ವಿಂಗ್ ಫ್ಯಾಕ್ಟ್ಸ್ ಪ್ರಕಟಿಸಿದ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ರಿಪಬ್ಲಿಕ್ ಪ್ರಕಟಿಸಿದ ಸುದ್ದಿಯನ್ನು ನಕಲಿ ಎಂಬ ಹಣೆಪಟ್ಟಿಯೊಂದಿಗೆ ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ, ಚಿನ್ಮೋಯ್ ಕೃಷ್ಣ ದಾಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಸೈಬುಲ್ ಇಸ್ಲಾಂ ಅಲಿಬ್ ಅವರನ್ನು ಕೊಲ್ಲಲಾಗಿದೆ ಎಂದು ಕೆಲವು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಾಹಿತಿ ಸಂಪೂರ್ಣ ಸುಳ್ಳು ಸುದ್ದಿ ಎಂದು ಹೇಳಿದೆ.
‘‘ಇಂದು ಛತ್ತಗ್ರಾಮದಲ್ಲಿ ಬರ್ಬರವಾಗಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕೆಲವು ಭಾರತೀಯ ಮಾಧ್ಯಮಗಳು ಹೇಳುತ್ತಿವೆ. ಈ ಪ್ರತಿಪಾದನೆ ಸುಳ್ಳು ಮತ್ತು ದುರುದ್ದೇಶಪೂರಿತವಾಗಿ ಹರಡಲಾಗುತ್ತಿದೆ. ಚಿನ್ಮೋಯ್ ಕೃಷ್ಣ ದಾಸ್ ಅವರು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವಕಾಲತ್ತಿನಲ್ಲಿ ವಕೀಲ ಸುಬಾಶಿಶ್ ಶರ್ಮಾ ಅವರನ್ನು ವಕೀಲರು ಎಂದು ಹೇಳಲಾಗಿದೆ. ಯಾವುದೇ ಪ್ರಚೋದನಕಾರಿ, ಸುಳ್ಳು ವರದಿಯಿಂದ ದೂರವಿರುವಂತೆ ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ’’ ಎಂದು ಪೋಸ್ಟ್ ಹೇಳಿದೆ.
ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಕಾಲತ್ತಿನಲ್ಲಿ (ಕಾನೂನು ದಾಖಲೆ) ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಸುಬಾಸಿಶ್ ಶರ್ಮಾ ಎಂದು ಹೆಸರಿಸಲಾಗಿದೆ ಎಂದು CA ಪ್ರೆಸ್ ವಿಂಗ್ ಫ್ಯಾಕ್ಟ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನೂ ಪೋಸ್ಟ್ ಮಾಡಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಕೀಲರನ್ನು ಬಾಂಗ್ಲಾದೇಶದಲ್ಲಿ ಕೊಲ್ಲಲಾಗಿದೆ ಎಂಬ ವರದಿ ಸುಳ್ಳು ಎಂದು ನ್ಯೂಸ್ ಮೀಟರ್ ಫ್ಯಾಕ್ಟ್‌ಚೆಕ್ ಮೂಲಕ ಸ್ಪಷ್ಟಪಡಿಸಿದೆ.”
ಒಟ್ಟಾರೆಯಾಗಿ ಹೇಳುವುದಾದರೆ. ಚಿನ್ಮೋಯ್ ಕೃಷ್ಣ ದಾಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಸೈಬುಲ್ ಇಸ್ಲಾಂ ಅಲಿಬ್ ಅವರನ್ನು ಕೊಲ್ಲಲಾಗಿದೆ ಎಂದು ಭಾರತದ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಏಕನಾಥ್ ಶಿಂಧೆಯನ್ನು ವೇದಿಕೆಯಿಂದ ಹಿಂದಕ್ಕೆ ತಳ್ಳಿದರೆ ಪ್ರಧಾನಿ ಮೋದಿ?

