FACT CHECK | ರಾಹುಲ್ ಗಾಂಧಿಯನ್ನು ಹೊಗಳಿದ್ರಾ ಗಡ್ಕರಿ?
ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಸಂದರ್ಶನದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಸಂದರ್ಶಕರು ನಿತಿನ್ ಗಡ್ಕರಿಯವರಿಗೆ ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ “ಗಾಂಧಿಯವರನ್ನುನಾನು ಭೇಟಿಯಾದಾಗ, ಅವರು ಮಹಾನ್ ವ್ಯಕ್ತಿಗಳು ಎಂದು ನಾನು ಅರಿತುಕೊಂಡೆ” ಎಂದು ಗಡ್ಕರಿಯವರು ಗಾಂಧಿಯವರನ್ನು ಹೊಗಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, BBC News YouTube ಚಾನಲ್ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ಲಭ್ಯವಾಗಿದೆ. 2024ರ ಅಕ್ಟೋಬರ್ 10 ರಂದು ವೈರಲ್ ಕ್ಲಿಪ್ನ ಸಂಪೂರ್ಣ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ಪ್ರಧಾನಿ ಹುದ್ದೆ, ಆರ್ಎಸ್ಎಸ್, ದುಬಾರಿ ಟೋಲ್ ತೆರಿಗೆ ಕುರಿತು ನಿತಿನ್ ಗಡ್ಕರಿ ಏನು ಹೇಳುತ್ತಾರೆ?” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
26ನೇ ನಿಮಿಷದ ವಿಡಿಯೋದಲ್ಲಿ, ನಿರೂಪಕರು ಗಡ್ಕರಿ ಅವರನ್ನು“ನೀವು ರಾಹುಲ್ ಗಾಂಧಿಯನ್ನು ಹೇಗೆ ನೋಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು, “ನಾನು ಎಲ್ಲರನ್ನೂ ಸಕಾರಾತ್ಮಕ ದೃಷ್ಟಿಕೋನದಿಂದ ನೋಡುತ್ತೇನೆ” ಎಂದು ಉತ್ತರಿಸಿದ್ದಾರೆ.
“ನಂತರ ಅವರು ಕಮ್ಯುನಿಸ್ಟ್ ಪಕ್ಷದ ಎಬಿ ಬರ್ಧನ್, ಕಿಸಾನ್ ಸಂಘಟನೆಯ ಶರತ್ ಜೋಶಿ ಮತ್ತು ಬಾಳಾ ಸಾಹೇಬ್ ದೇವರಸ್ ಅವರ ಸಹೋದರ ಭೌರಾವ್ ದೇವರಸ್ ಅವರ ಕುರಿತು ಮಾತನಾಡಿದ್ದಾರೆ. “ದೆಹಲಿಗೆ ಬಂದ ನಂತರ ನಾನು ಅನೇಕ ಜನರನ್ನು ಭೇಟಿಯಾದೆ – ಕ್ರಿಕೆಟಿಗರು, ಚಲನಚಿತ್ರ ನಟರು, ಬಿಲ್ ಗೇಟ್ಸ್ ಮತ್ತು ಇತರರು. ನಾನು ದೂರದಿಂದ ಬಹಳ ದೊಡ್ಡವರು ಎಂದು ಪರಿಗಣಿಸಿದ ಜನರು ಹತ್ತಿರದಲ್ಲಿ ನೋಡಿದಾಗ ನನಗೆ ಚಿಕ್ಕವರಂತೆ ಕಂಡರು. ನಾನು ಚಿಕ್ಕವರೆಂದು ತಿಳಿದುಕೊಂಡವರು ದೊಡ್ಡವರಾಗಿ ಕಂಡಿದ್ದಾರೆ ಎಂದು ಬಹಳ ಸೂಕ್ಷ್ಮವಾಗಿ ಉತ್ತರಿಸಿದ್ದಾರೆ. ಆದ್ದರಿಂದಾಗಿ ನಿರ್ದಿಷ್ಟವಾಗಿ ರಾಹುಲ್ ಗಾಂಧಿಯ ಬಗ್ಗೆ ಅವರು ಮಾತನಾಡಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗಡ್ಕರಿ ಅವರು ದೆಹಲಿಯಲ್ಲಿ ಭೇಟಿಯಾದ ಜನರೊಂದಿಗಿನ ಅನುಭವಗಳ ಕುರಿತು ಮಾತನಾಡಿರುವ ವಿಡಿಯೋವನ್ನು ರಾಹುಲ್ ಗಾಂಧಿಯವರನ್ನು ವಿಶೇಷವಾಗಿ ಹೊಗಳಿದ್ದಾರೆ ಎಂಬ ತಪ್ಪು ಅಭಿಪ್ರಾಯದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದ ಉತ್ಖನನದಲ್ಲಿ ಮಸೀದಿ ಪತ್ತೆಯಾಗಿದ್ದು ನಿಜವೇ?

