FACT CHECK | ಅರವಿಂದ್ ಕೇಜ್ರಿವಾಲ್‌ ಮೂಲ RSS ಎಂಬುದು ನಿಜವೇ?

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುರಿತಾದ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಅರವಿಂದ್ ಕೇಜ್ರಿವಾಲ್ ಅವರು ತಾವು ಮತ್ತು ತಮ್ಮ ಕುಟುಂಬ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರಾಗಿದ್ದರು ಎಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸುದ್ದಿಯು ಅರವಿಂದ್ ಕೇಜ್ರಿವಾಲ್ ಅವರು RSS ಗೆ ಪತ್ರವನ್ನು ಬರೆದ ನಂತರದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ RSS ನೊಂದಿಗೆ ಒಡನಾಟ ಹೊಂದಿದ್ದರು ಎಂಬುದು ಇದರಿಂದ ಖಚಿತವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿರುವುದನ್ನು ಇಲ್ಲಿ  ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅರವಿಂದ್ ಕೇಜ್ರಿವಾಲ್‌ ಅವರು ತಮ್ಮ ಕುಟುಂಬ ಹಾಗೂ ತಾವು ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದೇವೆ ಎಂದು ಹೇಳಿಕೊಂಡಿಲ್ಲ. ಇನ್ನು ಅರವಿಂದ್ ಕೇಜ್ರಿವಾಲ್ ಅವರು ತಾವು ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದರೆ ಆ ಕುರಿತು ಮಾಧ್ಯಮ ವರದಿಗಳು ಪ್ರಕಟವಾಗಬೇಕಿತ್ತು ಆದರೆ ಅಂತಹ ಯಾವುದೇ ವರದಿಗಳು ಕೂಡ ಕಂಡುಬಂದಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 4 ಫೆಬ್ರವರಿ 2020 ರಂದು ಎನ್‌ಡಿಟಿವಿಯ ಅಧಿಕೃತ YouTube ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಪೂರ್ಣ ವಿಡಿಯೋ ಲಭ್ಯವಾಗಿದೆ.

ಈ ವಿಡಿಯೋವಿನ 7 ನಿಮಿಷ 16 ಸೆಕೆಂಡ್‌ನ ಟೈಮ್ ಸ್ಟ್ಯಾಂಪ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ನಿರೂಪಕನೊಂದಿಗೆ ಮಾತನಾಡುತ್ತಾ “ನಾನು ಟಿವಿಯೊಂದರಲ್ಲಿ ನೋಡುತ್ತಿದ್ದೆ, ಬಿಜೆಪಿಯ ವ್ಯಕ್ತಿಯೊಬ್ಬ ನಾನು ಬಿಜೆಪಿಯ ಹಿನ್ನೆಲೆಯಿಂದ ಬಂದವನು, ನನ್ನ ಕುಟುಂಬವೂ ಕೂಡ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದೆ ಮತ್ತು ಜನಸಂಘದ ಸಿದ್ದಾಂತವನ್ನು ನಾವು ಒಪ್ಪಿದ್ದೇವೆ. ಆದರೆ ನಾವು ಆಪಗೆ ಈ ಬಾರಿ ಮತ ಹಾಕಲಿದ್ದೇವೆ. ಕಾರಣ ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಅಲ್ಲಿನ ವ್ಯವಸ್ಥೆ ನಿಜಕ್ಕೂ ಅದ್ಭುತವಾಗಿದೆ ಎಂದು ಆ ಬಿಜೆಪಿಯ ವ್ಯಕ್ತಿ ಹೇಳಿಕೊಂಡಿದ್ದಾನೆ” ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿಕೆಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅರವಿಂದ್‌ ಕೇಜ್ರಿವಾಲ್‌ ತಾವು ಮತ್ತು ತಮ್ಮ ಕುಟುಂಬ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಎನ್‌ಡಿಟಿವಿಯ ಸಂದರ್ಶನವೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಹೇಳಿಕೆಯನ್ನು  ಉಲ್ಲೇಖಿಸಿ ಅರವಿಂದ್ ಕೇಜ್ರಿವಲ್ ಮಾತನಾಡಿದ್ದರು, ಅದರ ವಿಡಿಯೋ ಕ್ಲಿಪ್‌ಅನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಒಂದು ವರ್ಷದ ಉಚಿತ ಮೊಬೈಲ್ ರೀಚಾರ್ಜ್ ಎಂಬ ಆಫರ್‌ಗಳ ಬಗ್ಗೆ ಇರಲಿ ಎಚ್ಚರ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights