FACT CHECK | ಉತ್ತರ ಪ್ರದೇಶದ ಪೊಲೀಸರು ಅಂಬೇಡ್ಕರ್‌ರವರ ಸಂದೇಶ ಅಳಿಸುವ ಮೂಲಕ ಅವಮಾನ ಮಾಡಿದ್ರಾ?

ಉತ್ತರ ಪ್ರದೇಶದ ಪೊಲೀಸರು ಫಲಕದ ಮೇಲಿದ್ದ ಅಂಬೇಡ್ಕರ್‌ ಸಂದೇಶ ಅಳಿಸಿ ಅವರಿಗೆ ಅವಮಾನ ಮಾಡಿದ್ದಾರೆ. ಈ ಮೂಲಕ ಸಂವಿಧಾನ ಶಿಲ್ಪಿಯ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

‘@AASHU_NSUI’ ಎಂಬ ಎಕ್ಸ್‌ ಬಳಕೆದಾರರು “ಇಟಾಹ್‌ನ ದೊಡಾಲ್‌ಪುರ ಗ್ರಾಮದಲ್ಲಿ ಬೋರ್ಡ್‌ನಲ್ಲಿ, ‘ನಿಮ್ಮ ಕಾಲಿಗೆ ಬೂಟುಗಳಿಲ್ಲದಿರಬಹುದು, ಆದರೆ ನಿಮ್ಮ ಕೈಯಲ್ಲಿ ಪುಸ್ತಕ ಇರಬೇಕು’ ಎಂದು ಬರೆದಿದ್ದಾರೆ. ಈ ಬರಹವನ್ನು ಅಳಿಸಲಾಗುತ್ತಿದೆ. ಬಾಬಾ ಸಾಹೇಬರ ವಿಚಾರಗಳಿಗೆ ಇಷ್ಟೊಂದು ದ್ವೇಷ ಯಾಕೆ?” ಎಂದು ಪ್ರಶ್ನಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

@BheemSingh81  ಎಂಬ ಮತ್ತೊಬ್ಬ ಎಕ್ಸ್‌ ಬಳಕೆದಾರರು ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ದೊಡಲ್ಪುರ್ ಹಳ್ಳಿಯಲ್ಲಿರುವ ಒಂದು ಬೋರ್ಡ್‌ನಲ್ಲಿ “ನಿಮ್ಮ ಕಾಲಿಗೆ ಶೂ ಇಲ್ಲದಿರಬಹುದು, ಆದರೆ ನಿಮ್ಮ ಕೈಯಲ್ಲಿ ಪುಸ್ತಕ ಇರಬೇಕು” ಎಂದು ಬರೆದಿತ್ತು. ಪೊಲೀಸ್ ಸಿಬ್ಬಂದಿ ಈ ಬರಹವನ್ನು ಅಳಿಸುತ್ತಿದ್ದಾರೆ. ಬಾಬಾ ಸಾಹೇಬರ ವಿಚಾರಗಳ ಬಗ್ಗೆ ಇಷ್ಟೊಂದು ದ್ವೇಷ? ಎಂದು ಬರೆದುಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿಕೊಂಡು ಎಕ್ಸ್‌ನಲ್ಲಿ ಸರ್ಚ್ ಮಾಡಿದಾಗ, @nirbhay6036 ಎಂಬ ಎಕ್ಸ್‌ ಬಳಕೆದಾರರ ಪೋಸ್ಟ್‌ ಲಭ್ಯವಾಗಿದೆ.

ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಕಂಡುಬಂದ ಬರಹದ ಪ್ರಕಾರ ದೊಡಲ್‌ಪುರ ಗ್ರಾಮದಲ್ಲಿ ಅಳವಡಿಸಿದ್ದ ಅಂಬೇಡ್ಕರ್‌ ಅವರ ಸಂದೇಶಗಳಿದ್ದ ಬೋರ್ಡ್‌ಗಳ ಮೇಲೆ ಕೆಲವರು ಕಪ್ಪು ಮಸಿ ಅಥವಾ ಕಪ್ಪಾದ ಎಣ್ಣೆ ಸುರಿದಿದ್ದರು. ಇದನ್ನು ಪೊಲೀಸರು ಸ್ವಚ್ಛಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲೆಂದು ಸೋಶಿಯಲ್ ಮೀಡಿಯಾದಲ್ಲಿ  ಮತ್ತಷ್ಟು ಸರ್ಚ್ ಮಾಡಿದಾಗ,  ಇಟಾಹ್‌ ಪೊಲೀಸರ (@Etahpolice) ಎಕ್ಸ್‌ ಪೋಸ್ಟ್‌ ಲಭ್ಯವಾಗಿದೆ. ಇದರಲ್ಲಿ ಮಸಿ ಬಳಿದಿರುವ ಸುದ್ದಿ ಸಿಗುತ್ತಿದ್ದಂತೆ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಗ್ರಾಮದ ಗಣ್ಯರೊಂದಿಗೆ ಮಾತನಾಡಿ ಬೋರ್ಡ್‌ನಲ್ಲಿದ್ದ ಮಸಿ ತೆಗೆದು ಸ್ವಚ್ಚಗೊಳಿಸಿದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಸಹಜವಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಹೇಳಿಕೆಯನ್ನು ಪೊಲೀಸರೇ ಅಳಿಸಿ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ ಸಂಪೂರ್ಣ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, ಉತ್ತರ ಪ್ರದೇಶದಲ್ಲಿ ಯಾರೋ ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಸಂದೇಶದ ಮೇಲೆ ಬಳಿಯಲಾಗಿದ್ದ ಮಸಿಯನ್ನು ಪೊಲೀಸರು ಸ್ವಚ್ಚಗೊಳಿಸಿದ ವಿಡಿಯೋವನ್ನು,  ಡಾ.ಬಿ.ಆರ್‌. ಅಂಬೇಡ್ಕರ್ ಅವರ ಹೇಳಿಕೆಯನ್ನು ಪೊಲೀಸರೇ ಅಳಿಸಿ ಹಾಕುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಾಧುಗಳು ಮಹಾಕುಂಭದಲ್ಲಿ ಮದ್ಯ ಮಾಂಸ ಸೇವಿಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights