FACT CHECK | ಅಖಿಲೇಶ್ ಯಾದವ್ ಮಹಾಕುಂಭ ಮೇಳದಲ್ಲಿ ಶಾಹೀ ಸ್ನಾನ ಸ್ನಾನ ಮಾಡಿದ್ರಾ?

ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿರುವ ಮಹಾಕುಂಭದಲ್ಲಿ ಕೋಟ್ಯಾಂತರ ಭಕ್ತರು ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೆ ಎನ್ನಲಾಗಿದೆ. ಈ ಮಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದ್ದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ನೀರಿನಲ್ಲಿ ನಿಂತಿರುವುದನ್ನು ಕಾಣಬಹುದು. ಮಹಾಕುಂಭದಲ್ಲಿ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದರು ಎಂದು ಪ್ರತಿಪಾದಿಸಿ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಕುಂಭಮೇಳದ ಶಾಹೀ ಸ್ನಾನಕ್ಕೆ ಬಂದ್ರೆ ಯಾರಿಗೂ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲೇಶ್ ಯಾದವ್’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಮತ್ತೊಬ್ಬ ಬಳಕೆದಾರ ‘‘ಯೋಗಿ ಎಫೆಕ್ಟ್; ಅಖಿಲೇಶ್ ಯಾದವ್ ಇನ್ ಕುಂಭಮೇಳ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಯಾರು ಇಲ್ಲದ  ಸಂದರ್ಭದಲ್ಲಿ ಶಾಹೀ ಸ್ನಾನ ಮಾಡಿದ್ದಾರೆ ಎಂಬ ವಾದ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ, ಅಖಿಲೇಶ್ ಯಾದವ್ ಅವರ ಎಕ್ಸ್ ಖಾತೆಯಲ್ಲಿ ಇದೇ ಫೋಟೋ ಅಪ್ಲೋಡ್ ಆಗಿರುವು ಕಂಡುಬಂದಿದೆ. ಈ ವೈರಲ್ ಫೋಟೋದ ಜೊತೆಗೆ ಇನ್ನೆರಡು ಫೋಟೋವನ್ನು ಕೂಡ ಅವರು ಜನವರಿ 14, 2025 ರಂದು ಹಂಚಿಕೊಂಡಿದ್ದಾರೆ. ಇದಕ್ಕೆ ‘‘ಮಕರ ಸಂಕ್ರಾಂತಿಯ ಪವಿತ್ರ ಹಬ್ಬದಂದು ಗಂಗಾ ಮಾತೆಯ ಆಶೀರ್ವಾದ ಪಡೆದರು’’ ಎಂಬ ಶೀರ್ಷಿಕೆ ನೀಡಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಗೂಗಲ್​ನಲ್ಲಿ ‘ಅಖಿಲೇಶ್ ಯಾದವ್ ಗಂಗಾ ಸ್ನಾನ’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ,  NDTV ವೆಬ್‌ಸೈಟ್‌ನಲ್ಲಿ‘‘ಅಖಿಲೇಶ್ ಯಾದವ್ ಮಕರ ಸಂಕ್ರಾಂತಿಯಂದು ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದರು’’ ಎಂಬ ಶೀರ್ಷಿಕೆ ನೀಡಿ ಜನವರಿ 14, 2025 ರಂದು ಇದೇ ವೈರಲ್ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

‘‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂಗಳವಾರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸ್ಥಳವನ್ನು ಬಹಿರಂಗಪಡಿಸದಿದ್ದರೂ, ಅವರು ಹರಿದ್ವಾರದಲ್ಲಿ ಸ್ನಾನ ಮಾಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ’’ ಎಂಬುದನ್ನು NDTV ಬರೆದಿದೆ.

ಹಾಗೆಯೆ Aamar Ujala ಕೂಡ ವೈರಲ್ ಫೋಟೋದ ಜೊತೆ ಜನವರಿ 14, 2025 ರಂದು ಅಖಿಲೇಶ್ ಯಾದವ್ ಅವರು ಮಕರ ಸಂಕ್ರಾಂತಿಯ ಸಂದರ್ಭ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು ಎಂದು ಹೇಳಿದೆ. ‘‘ಇದು ಅಖಿಲೇಶ್ ಅವರ ವೈಯಕ್ತಿಕ ಭೇಟಿಯಾಗಿದ್ದು, ಹರಿದ್ವಾರದ ಸ್ಥಳೀಯ ಪಕ್ಷದ ಕಾರ್ಯಕರ್ತರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರವಾಸದ ನಂತರ, ಅವರು ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಖಿಲೇಶ್ ಹರಿದ್ವಾರದ ವಿಐಪಿ ಘಾಟ್‌ನಲ್ಲಿ ಗಂಗಾದಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ’’ ಎಂದು ಬರೆಯಲಾಗಿದೆ.

ಜನವರಿ 14, 2025 ರಂದು ಅಖಿಲೇಶ್ ಯಾದವ್ ಅವರು ಮಕರ ಸಂಕ್ರಾಂತಿಯ ಸಂದರ್ಭ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು ಎಂದು ಸುದ್ದಿ ಪ್ರಕಟ ಆಗಿರುವುದನ್ನು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಖಿಲೇಶ್ ಯಾದವ್ ಮಕರ ಸಂಕ್ರಾಂತಿಯ ಸಂದರ್ಭ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಫೋಟೊವನ್ನು, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದ ಪೋಸ್ಟ್‌ರ್ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ಮೂತ್ರ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights