FACT CHECK | ದಿಲ್ಲಿಯಲ್ಲಿ AAP ಹಾಡಿಗೆ ಕಾಂಗ್ರೆಸ್‌ ನಾಯಕರು ನೃತ್ಯ ಮಾಡಿದ್ರಾ ?

ದಿಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ, ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಗಿಣಿ ನಾಯಕ್ ಅವರು ಆಮ್ ಆದ್ಮಿ ಪಕ್ಷದ (AAP) ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

 

ದಿಲ್ಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಹೊರ ಬೀಳಲಿದೆ. AAP, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಎಪಿ ಕಳೆದ 10 ವರ್ಷಗಳಿಂದ ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದು, ಈ ಬಾರಿ ಶತಾಯ ಗತಾಯ ಆಮ್‌ ಆದ್ಮಿ ಪಕ್ಷದಿಂದ ಅಧಿಕಾರ ಕಸಿದುಕೊಳ್ಳಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಹೋರಾಡುತ್ತಿವೆ.

ರಾಗಿಣಿ ನಾಯಕ್ ಅವರು ಕಾಂಗ್ರೆಸ್ ನಾಯಕರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ದೀಪಕ್ ಶರ್ಮಾ ಎನ್ನುವವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಳ್ಳುವ ವೇಳೆ, “ಕಾಂಗ್ರೆಸ್ಸಿಗರ ನಡವಳಿಕೆ ವಿಚಿತ್ರ. ಟಿವಿಯಲ್ಲಿ ಎಎಪಿಯನ್ನು ಟೀಕಿಸುತ್ತಾರೆ, ಆದರೆ ವೇದಿಕೆಯಲ್ಲಿ ಕೇಜ್ರಿವಾಲ್ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಇದೇನು ಸಂಬಂಧ?” ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋ ಪೋಸ್ಟ್‌ ಮಾಡಿ ಅವರು ರಾಗಿಣಿ ನಾಯಕ್, ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ ಮತ್ತು ಪಕ್ಷದ ವಕ್ತಾರ ಪವನ್ ಖೇರಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಹಲವು ವೆಬ್‌ಸೈಟ್‌ಗಳಲ್ಲಿ ವರದಿಗಳು ಮತ್ತು ವಿಡಿಯೋಗಳಲ್ಲಿ ಹಂಚಿಕೊಂಡ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಜನವರಿ 23 ರಂದು ಕಾಂಗ್ರೆಸ್ ತನ್ನ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದೆ. ಈ ಸಂದರ್ಭದಲ್ಲಿ ಪಕ್ಷದ ನಾಯಕರು ಚುನಾವಣಾ ಗೀತೆಗೆ ಹೆಜ್ಜೆ ಹಾಕಿದ್ದರು ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

‘ಎನ್‌ಡಿಟಿವಿ ಇಂಡಿಯಾ’ದ ಯೂಟ್ಯೂಬ್‌ ಚಾನಲ್‌ನಲ್ಲಿಯೂ ಈ ವಿಡಿಯೋ ಲಭ್ಯವಿದೆ. ‘ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಪವನ್ ಖೇರಾ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ವಜೀರ್‌ಪುರ್ ಕ್ಷೇತ್ರದ ಅಭ್ಯರ್ಥಿ ರಾಗಿಣಿ ನಾಯಕ್ ಸೇರಿದಂತೆ ನಾಯಕರು ಚುನಾವಣಾ ಗೀತೆಗೆ ಹೆಜ್ಜೆ ಹಾಕಿದರು’ ಎಂದು ಇದರಲ್ಲಿ ಬರೆಯಲಾಗಿದೆ.

ಇಟಿವಿ ಭಾರತ್‌, ನ್ಯೂಸ್18 ಹಿಂದಿಯಲ್ಲೂ ಈ ಬಗ್ಗೆ ವರದಿಗಳಿವೆ. ಇದರಲ್ಲೂ ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಪಕ್ಷವು ತನ್ನ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ರಾಗಿಣಿ ನಾಯಕ್ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ. ವಿವರವಾದ ಪರಿಶೀಲನೆಯಿಂದ ಕಾಂಗ್ರೆಸ್‌ ನಾಯಕರು ಅರವಿಂದ್ ಕೇಜ್ರಿವಾಲ್ ಅವರ ಹಾಡಿಗೆ ನೃತ್ಯ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಗಿಣಿ ನಾಯಕ್ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಚುನಾವಣಾ ಗೀತೆಗೆ ನೃತ್ಯ ಮಾಡಿದ್ದಾರೆಯೇ ಹೊರತು ಎಎಪಿಯ ಹಾಡಿಗಲ್ಲ ಎಂದು ದರಢಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕುಂಭ ಮೇಳದ ಬಗ್ಗೆ ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಿದ ಮಾಧ್ಯಮಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights