FACT CHECK | ಮಹಾ ಕುಂಭಮೇಳದಲ್ಲಿ ದೋಣಿ ಮುಳುಗಿ 11 ಜನ ಭಕ್ತರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು
ಮಹಾ ಕುಂಭಮೇಳದಲ್ಲಿ ದೋಣಿ ಮುಳುಗಿ ಸುಮಾರು 11 ಜನ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಡಾ. ಸಂದೀಪ್ ಕುಮಾರ್ ಎಂಬ ಯೂಟ್ಯೂಬರ್ ತಮ್ಮ ಚಾನೆಲ್‌ನಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, tigers_0009 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಈ ವಿಡಿಯೋ ಹರಿದಾಡುತ್ತಿದೆ.
View this post on Instagram
ವೈರಲ್ ವಿಡಿಯೋದಲ್ಲಿ ಯಾವುದೋ ದುರಂತ ಸಂಭವಿಸಿರುವುದು ಕಂಡುಬಂದಿದ್ದು, ಕೆಲವು ಜನರು ನದಿಯಲ್ಲಿ ಮುಳುಗುತ್ತಿರುವುದನ್ನು ಮತ್ತು ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿರುವುದನ್ನು ಕಾಣಬಹುದು. ಯೂಟ್ಯೂಬರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆದಾರರು, ಈ ಘಟನೆ ಮಹಾಕುಂಭ ಮೇಳದಲ್ಲಿ ನಡೆದಿದ್ದು, 11 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವೈರಲ್ ವಿಡಿಯೋದ ಪ್ರಮುಖ ಕೀ ಫ್ರೇಮ್‌ಗಳನ್ನು ತಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಒಂದು ವಾರದ ಹಳೆಯ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ, ಮಹಾಕುಂಭದ ಸಂಗಮದಲ್ಲಿ ದೋಣಿ ಮುಳುಗಿರುವುದಾಗಿ ವರದಿಯಾಗಿತ್ತು.
ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದಾದರೂ ಅಧಿಕೃತ ವರದಿಗಳು ಕಂಡುಬಂದಿವೆಯೇ ಎಂದು ವಿವಿಧ ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಘಟನೆಯ ಕುರಿತು ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ಸುದ್ದಿ ಸಂಸ್ಥೆಗಳು ಆ ಕುರಿತು ವರದಿಯನ್ನು ಪ್ರಕಟಿಸುತ್ತಿದ್ದವು.
![]()
‘Boat capsizes in Kumbh Mela’ ಎಂಬ ಕೀವರ್ಡ್‌ನೊಂದಿಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಎಬಿಪಿ ನ್ಯೂಸ್, ಇಂಡಿಯಾ ಟಿವಿ ಮತ್ತು 26 ಜನವರಿ 2025 ರ ನ್ಯೂಸ್ 18 ಇಂಡಿಯಾ ವರದಿಗಳು ಲಭ್ಯವಾಗಿವೆ. ಪ್ರಕಾರ ಜನವರಿ 26ರಂದು ಪ್ರಯಾಗ್‌ರಾಜ್‌ನಲ್ಲಿನ ಮಹಾಕುಂಭಮೇಳದ ಸಂಗಮ ಘಾಟ್‌ನಲ್ಲಿ ದೋಣಿ ಮಗಚಿ ಬಿದ್ದಿದ್ದು, NDRF ತಂಡ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿರುವುದು ಕಂಡುಬಂದಿದೆ. ಇದೇ ರೀತಿಯ ವರದಿಗಳನ್ನು ವಿವಿಧ ಸುದ್ದಿ ಸಂಸ್ಥೆಗಳು ಪ್ರಕಟಿಸಿರುವುದು ಕೂಡ ಕಂಡು ಬಂದಿದೆ. ಆದರೆ ಅದೃಷ್ಟವಶತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂಬುದು ಖಚಿತವಾಗಿದೆ.
‘ಎಬಿಪಿ ನ್ಯೂಸ್’ನ ವರದಿಯ ಪ್ರಕಾರ, ಮಹಾಕುಂಭ ಮೇಳದ ಸಂಗಮ ಪ್ರದೇಶದ ಅರೈಲ್ ಘಾಟ್‌ನಲ್ಲಿ ದೋಣಿ ಮುಳುಗಡೆಯಾಗಿತ್ತು. ಎನ್‌ಡಿಆರ್‌ಎಫ್ ತಂಡ ಅಣಕು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಈ ಘಟನೆ ನಡೆದಿತ್ತು. ಎನ್‌ಡಿಆರ್‌ಎಫ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಎಲ್ಲಾ 10 ಯಾತ್ರಿಕರನ್ನು ರಕ್ಷಿಸಲಾಗಿದೆ. ಇಬ್ಬರು ದೋಣಿ ನಡೆಸುವವರೂ ಸಂಕಷ್ಟಕ್ಕೆ ಸಿಲುಕಿದ್ದರು. ಇವರನ್ನೂ ರಕ್ಷಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಪ್ರಯಾಗ್‌ರಾಜ್‌ನ ದೋಣಿ ದುರಂತದಲ್ಲಿ ಸುಮಾರು 11 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ. ದೋಣಿ ದುರಂತವಾಗಿದ್ದು, ನಿಜವಾಗಿದ್ದು, ಆದರೆ ಅದರಲ್ಲಿದ್ದ ಎಲ್ಲಾ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿಯೊಂದಿಗೆ ಕೂತು ಊಟ ಮಾಡುತ್ತಿರುವ ಫೋಟೊದ ಅಸಲೀಯತ್ತೇನು ಗೊತ್ತೆ?

