FACT CHECK | ಕ್ರಿಶ್ಚಿಯನ್ನರನ್ನು ಕೊಲ್ಲುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ರಾ ಸಂಘ ಪರಿವಾರದ ಸದಸ್ಯರು

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಆರ್‌ಎಸ್‌ಎಸ್ ಸದಸ್ಯರು 01 ಮಾರ್ಚ್  2025 ರಿಂದ ಛತ್ತೀಸ್‌ಗಢದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಕೆಸರಿ ಬಟ್ಟೆಯನ್ನು ಧರಿಸಿ, ತ್ರಿಶೂಲದಂತಹ ಆಯುಧ ಹಿಡಿದು ಪುರುಷರ ಗುಂಪು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲವರು ಭವಿಷ್ಯದಲ್ಲಿ ಕ್ರೈಸ್ತ ಸಮುದಾಯ ಹೆಚ್ಚು ಅಪಾಯಗಳನ್ನು ಭಾರತದಲ್ಲಿ ಎದುರಿಸಲಿದೆ ಎಂದು ಪೋಸ್ಟ್‌ ಮಾಡಿ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.  ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ವಿಡಿಯೋದ ಕೆಲವು ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ 27 ನವೆಂಬರ್ 2024ರಂದು  ದೈನಿಕ್ ಭಾಸ್ಕರ್  ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ಈ ವರದಿಯ ಪ್ರಕಾರ 2024 ರ ನವೆಂಬರ್ 27 ರಂದು ರಾಜನಂದಗಾಂವ್‌ನಲ್ಲಿ ವಿಎಚ್‌ಪಿ ಮತ್ತು ಬಜರಂಗದಳದಿಂದ ಬೃಹತ್ ತ್ರಿಶೂಲ್ ದೀಕ್ಷೆಯನ್ನು ಆಯೋಜಿಸಲಾಗಿತ್ತು, ಅಲ್ಲಿ ಭಾಗವಹಿಸುವವರು ದೇಶ, ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಆದರೆ ಇದಕ್ಕೂ ವೈರಲ್‌ ವಿಡಿಯೋಗೂ ಯಾವುದೇ ರೀತಿಯಾದ ಹೋಲಿಕೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, 27  ಡಿಸೆಂಬರ್ 2024 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ. ಇದರಲ್ಲಿ ತೆಲುಗಿನಲ್ಲಿ ವ್ಯಕ್ತಿಗಳು ತೆಲುಗಿನಲ್ಲಿ ಹೆಸರು ಬರೆದ ಬಜರಂಗದಳ ಟಿ-ಶರ್ಟ್ ಧರಿಸಿರುವುದು ಕಂಡು ಬಂದಿದೆ. ಈ ಸದಸ್ಯರು ಹಿಂದೂ ಧರ್ಮ, ಅದರ ಮೌಲ್ಯಗಳು ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸುವುದಾಗಿ ತೆಲುಗಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಕಂಡುಬಂದಿದೆ.  ಅವರು ತಮ್ಮ ನಂಬಿಕೆ ಮತ್ತು ರಾಷ್ಟ್ರವನ್ನು ಯಾವುದೇ ಬೆದರಿಕೆಗಳಿಂದ ರಕ್ಷಿಸುವುದಾಗಿ, ಹಿಂದೂ ಐಕ್ಯತೆಯನ್ನು ಬೆಂಬಲಿಸಲು ಮತ್ತು ಸಮುದಾಯವನ್ನು ರಕ್ಷಿಸಲು ಬದ್ಧರಾಗಿರುವುದಾಗಿದ್ದೇವೆ ಎಂದು ಪ್ರತಿಜ್ಞೆ ಮಾಡಿರುವುದು ಸ್ಪಷ್ಟವಾಗಿ ಕೇಳಿ ಬಂದಿದೆ. ಆದರೆ ಇದರಲ್ಲಿ ಎಲ್ಲಿಯೂ ಕ್ರೈಸ್ತರನ್ನು ಕೊಲ್ಲುತ್ತೇವೆ ಎಂದು ಹೇಳಿರುವುದು ಕಂಡು ಬಂದಿಲ್ಲ.

ಇನ್ನು ಕ್ರೈಸ್ತರನ್ನು ಕೊಲ್ಲವ ರೀತಿ ವಿಶ್ವ ಹಿಂದೂ ಪರಿಷತ್‌ ಮತ್ತು ಆರ್‌ಎಸ್‌ಎಸ್‌ ಯಾವುದಾದರೂ ಧಿಕ್ಷೆ ನೀಡಿದೆಯೇ ಎಂದು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಧಿಕೃತ ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ವೈರಲ್‌ ವಿಡಿಯೋದಲ್ಲಿ ಉಲ್ಲೇಖಿಸಿದ್ದು ನಿಜವಾಗಿದ್ದರೆ ಹಲವು ಮಾಧ್ಯಮಗಳು ವರದಿ ಮಾಡಬೇಕಿತ್ತು. ಆದರೆ ಅಂತಹ ವರದಿಗಳು ಕಂಡು ಬಾರದ ಕಾರಣ ವೈರಲ್‌ ವಿಡಿಯೋವನ್ನು ದಾರಿ ತಪ್ಪಿಸುವ ರೀತಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವ ಹಿಂದೂ ಪರಿಷತ್‌ ಮತ್ತು ಆರ್‌ಎಸ್‌ಎಸ್‌ ಮಾರ್ಚ್ 1 ರಿಂದ ಛತ್ತೀಸ್‌ಗಢ ಕ್ರಿಶ್ಚಿಯನ್ನರನ್ನು ಕೊಲ್ಲುವುದಾಗಿ ಪ್ರಮಾಣ ವಚನ ತೆಗೆದುಕೊಂಡಿದೆ ಎಂಬುದು ಸುಳ್ಳಾಗಿದೆ. ಇಂತಹ ಸುಳ್ಳು ಮತ್ತು ದಾರಿ ತಪ್ಪಿಸುವ ಪೋಸ್ಟ್‌ಅನ್ನು ಹಂಚಿಕೊಳ್ಳುವುದು ಕ್ರಿಮಿಸಲ್ ಅಪರಾದವಾಗಿರುತ್ತದೆ

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್ 

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕಿಸ್ತಾನಕ್ಕೆ ಹೋದ್ರಾ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ? ವೈರಲ್ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights