FACT CHECK | ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಹಿಂದೂ ಮನೆಗಳನ್ನು ಟಾರ್ಗೆಟ್ ಮಾಡಿ ಲೂಟಿ ಮಾಡಿದ್ರಾ?

ಮುಸ್ಲಿಮರು ಪಶ್ಚಿಮ ಬಂಗಾಳದ ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೊಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವು ಜನರು ಬಹುಮಹಡಿಯ ಮನೆಯ ಮೇಲೆ ಹತ್ತಲು ಪ್ರಯತ್ನ ಮಾಡುತ್ತಿರುವುದು ಕಾಣಬಹುದು. ಹಾಗೆ ಇನ್ನೂ ಕೆಲ ಜನರು ಮನೆಯ ಬಾಗಿಲು ಒಡೆದು ಒಳ ಹೋಗಲು ಪ್ರಯತ್ನಿಸುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಫೆಬ್ರವರಿ 25, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಈ ದೃಶ್ಯ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಅಲ್ಲ. ನೆರೆಯ ಪಶ್ಚಿಮ ಬಂಗಾಳ. ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತಿರೋದು ಯಾವ ರಾಜ ಕಾರಣಿ ನೀನು ಬರೋಲ್ಲ ಯಾವ ಮೀಡಿಯಾ ಕೂಡ ಬರೋಲ್ಲ ನಿಮ್ಮ ರಕ್ಷಣೆ ಮಾಡೋಕೆ. ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿದೆ. ಹಿಂದುಗಳೇ ಎಚ್ಚರ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಸ್ಕ್ರೀನ್ ಶಾಟ್​ಗೆ ಹೊಂದಿಕೆಯಾಗುವ ಅನೇಕ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆಗಸ್ಟ್ 21, 2022 ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ಆಗಸ್ಟ್ 21, 2022 ರಂದು, ‘‘ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಹಿಂದೂ ನೈರ್ಮಲ್ಯ ಕಾರ್ಮಿಕ ಅಶೋಕ್ ಕುಮಾರ್ ವಿರುದ್ಧ 295B ಅಡಿಯಲ್ಲಿ ಧರ್ಮನಿಂದೆಯ ಪ್ರಕರಣ ದಾಖಲಿಸಲಾಯಿತು. ಸ್ಥಳೀಯ ಅಂಗಡಿಯವನೊಂದಿಗೆ ನಡೆದ ಜಗಳದಲ್ಲಿ ಅಶೋಕ್ ಕುಮಾರ್ ವಿರುದ್ಧ ದೂರು ದಾಖಲಿಸಿದ ನಂತರ ಈ ಆರೋಪ ಹೊರಿಸಲಾಗಿದೆ. ಇದನ್ನು ತಿಳಿದ ಒಂದು ದೊಡ್ಡ ಗುಂಪು ಜಮಾಯಿಸಿ ಕುಮಾರ್ ಅವರನ್ನು ಹಿಡಿಯಲು ಪ್ರಯತ್ನಿಸಿತು. ನಂತರ, ಸಿಂಧ್ ಪೊಲೀಸರು ಗುಂಪನ್ನು ಚದುರಿಸಿದರು’’ ಎಂದು ವರದಿಯಲ್ಲಿದೆ.

Global Hook ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಆಗಸ್ಟ್ 23, 2022 ರಂದು ಅಪ್ಲೋಡ್ ಮಾಡಲಾಗಿದ್ದು, ‘‘ಧಾರ್ಮಿಕ ಪುಸ್ತಕದ ಪುಟಗಳನ್ನು ಸುಟ್ಟು ದೇವದೂಷಣೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಹಿಂದೂ ನೈರ್ಮಲ್ಯ ಕಾರ್ಮಿಕರೊಬ್ಬರನ್ನು ಬಂಧಿಸಲಾಗಿದೆ. ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ ಎಂಬ ಉಗ್ರಗಾಮಿ ಗುಂಪು ಭಾನುವಾರ ಹಿಂದೂ ಕುಟುಂಬಗಳು ವಾಸಿಸುವ ವಸತಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದ ನಂತರ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿದೆ’’ ಎಂದು ಮಾಹಿತಿ ನೀಡಿದೆ.

ಟೈಮ್ಸ್ ನೌ ಆಗಸ್ಟ್ 23, 2022 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ವರದಿ ಮಾಡಿದ್ದು, ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವ ಹಿಂದೂ ನೈರ್ಮಲ್ಯ ಕಾರ್ಮಿಕರೊಬ್ಬರ ವಿರುದ್ಧ ಧರ್ಮನಿಂದೆಯ ನಕಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಶೋಕ್ ಕುಮಾರ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಕಸ ಗುಡಿಸುವ ಕೆಲಸಗಾರನಾಗಿದ್ದಾನೆ. ಉದ್ರಿಕ್ತ ಗುಂಪೊಂದು ಅಶೋಕ್ ಕುಮಾರ್ ಅವರನ್ನು ಹಿಡಿಯಲು ಅಪಾರ್ಟ್ಮೆಂಟ್ ಕಟ್ಟಡದ ಸುತ್ತಲೂ ಜಮಾಯಿಸಿತು. ಆದರೆ, ಹೈದರಾಬಾದ್ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದರು’’ ಎಂದು ಬರೆದುಕೊಂಡಿದೆ.

ಒಟ್ಟಾರೆಯಾಗಿ ಹೆಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಹಿಂದುಗಳ ಮನೆಗಳನ್ನ ಟಾರ್ಗೆಟ್ ಮಾಡಿ ದೋಚುತ್ತಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು. ವಾಸ್ತವವಾಗಿ ಇದು ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವ ವೀಡಿಯೊ ಆಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಗತ್ ಸಿಂಗ್, ಅಂಬೇಡ್ಕರ್‌ ಫೋಟೋವನ್ನು ದೆಹಲಿ ಸಿಎಂ ಕಚೇರಿಯಿಂದ ತೆಗೆಯಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights