FACT CHECK | 50 ಲಕ್ಷ ರೂಪಾಯಿಯ ಕಾರು ಖರೀದಿಸಿದ್ರಾ ದೆಹಲಿ ಸಿಎಂ ರೇಖಾ ಗುಪ್ತಾ ?

ದಿಲ್ಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ವಹಿಸಿಕೊಂಡು, ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ. ಆದರೆ ಇದೇ ವೇಳೆ ಅವರು ಹಲವು ಆರೋಪಗಳಿಗೆ ಗುರಿಯಾಗಿದ್ದಾರೆ. ಸಿಎಂ ಆಗುತ್ತಿದ್ದಂತೆ 50 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೋಗಳು, ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ಕಾರಿನ ವಿಡಿಯೋವೊಂದನ್ನು _Amoxicillin ಎಂಬ ಎಕ್ಸ್‌ ಬಳಕೆದಾರರು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು, ‘ಬಿಜೆಪಿಯ ಹಿಪೋಕ್ರಸಿ ಬಹಿರಂಗ: ರೇಖಾ ಗುಪ್ತಾ ದಿಲ್ಲಿಯ ಸಿಎಂ ಆಗಿದ್ದಕ್ಕೆ 50 ಲಕ್ಷ ರೂ.ಗಳ ಕಾರು ಖರೀದಿಸಿದ್ದಾರೆ. ಇದೇ ಬಿಜೆಪಿಯ ಜನರು ಅರವಿಂದ್ ಕೇಜ್ರಿವಾಲ್ ಅವರ 20 ಲಕ್ಷ ರೂ. ಕಾರಿನ ಬಗ್ಗೆ ಗಲಾಟೆ ಮಾಡುತ್ತಿದ್ದರು,’ ಎಂದು ಬರೆದಿದ್ದಾರೆ.

ಇದಲ್ಲದೆ, AAP_DarshanS ಎಂಬ ಬಳಕೆದಾರರು ಕೂಡ ಇದೇ ಕಾರಿನ ವಿಡಿಯೋವನ್ನು ಹಂಚಿಕೊಂಡು, “ಸಿಎಂ ಆಗಿ 48 ಗಂಟೆಗಳಲ್ಲಿ 50 ಲಕ್ಷ ರೂ.ಗಳ ಕಾರು! ರೇಖಾ ಗುಪ್ತಾ ಸರಕಾರಿ ನಿವಾಸಕ್ಕೆ ಹೋಗುವುದಿಲ್ಲ, ಆದರೆ ಹೊಸ ಕಾರಿಗೆ ಹಣ ಖರ್ಚು ಮಾಡಿದ್ದಾರೆ,” ಎಂದು ಹೇಳಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

 ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್‌ಶಾಟದ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎನ್‌ಡಿವಿಟಿಯ ವರದಿ ಲಭ್ಯವಾಗಿದೆ. ಇದರಲ್ಲಿ ದಿಲ್ಲಿಯ ಸಿಎಂಗೆ ನೀಡಲಾಗಿರುವ ಸರಕಾರಿ ಕಾರು ಹಾಗೂ ನಿವಾಸದ ಬಗ್ಗೆ ವಿವರಿಸಲಾಗಿತ್ತು. ಇದರಲ್ಲಿ ಕಪ್ಪು ಬಣ್ಣದ ಕಾರನ್ನು ನೋಡಬಹುದಾಗಿದೆ. ಈ ಕಾರಿನ ನಂಬರ್‌ ಪ್ಲೇಟ್‌ ಹಾಗೂ ಪೋಸ್ಟ್‌ಗಳಲ್ಲಿ ವೈರಲ್‌ ಆಗಿರುವ ಕಾರಿನ ನಂಬರ್‌ ಪ್ಲೇಟ್‌ ಒಂದೇ ಇದೆ. ಜೊತೆಗೆ ಇದು ಸರಕಾರಿ ಕಾರು ಎಂದು ಹೇಳಲಾಗಿದೆ.

ಇದಾದ ಬಳಿಕ ಈ ಹಿಂದೆ ಅರವಿಂದ್‌ ಕೇಜ್ರಿವಾಲ್‌ ದಿಲ್ಲಿಯ ಸಿಎಂ ಆಗಿದ್ದಾಗ ಈ ಕಾರನ್ನು ಬಳಸುತ್ತಿದ್ದರೇ ಎಂದು ಪರಿಶೀಲಿಸಲು ಕೆಲವು ಹಳೆಯ ವಿಡಿಯೋಗಳ ಬಗ್ಗೆ ಸರ್ಚ್ ಮಾಡಿದಾಗ, socialnews.xyzನ 2023ರ ವರದಿಯೊಂದರಲ್ಲಿ ಅರವಿಂದ್‌ ಕೇಜ್ರಿವಾಲ್‌ ಈ ಕಾರನ್ನು ಬಳಸುತ್ತಿರುವುದು ಕಂಡುಬಂತು.

ಅದೇ ರೀತಿ, @moronhumor ಎಂಬ ಎಕ್ಸ್ ಬಳಕೆದಾರರ ಪೋಸ್ಟ್‌ನಲ್ಲಿಯೂ ಅರವಿಂದ್ ಕೇಜ್ರಿವಾಲ್ ಮತ್ತು ಆತಿಶಿ ಕೂಡ ಈ ಸರಕಾರಿ ಕಾರನ್ನು ಬಳಸುತ್ತಿರುವುದು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿಯ ರೇಖಾ ಗುಪ್ತಾ ದಿಲ್ಲಿಯ ಸಿಎಂ ಆಗುತ್ತಿದ್ದಂತೆ  50 ಲಕ್ಷ ರೂ.ಗಳ ಕಾರು ಖರೀದಿಸಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ತಿಳಿದು ಬಂದಿದೆ. ರೇಖಾ ಗುಪ್ತಾ ಅವರ ಮನೆಯಲ್ಲಿ ಕಾಣಿಸಿಕೊಂಡ ಕಾರು ಸರಕಾರಿ ಕಾರು ಆಗಿದ್ದು, ಇದನ್ನು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಮತ್ತು ಆತಿಶಿ ಕೂಡ ಬಳಸುತ್ತಿದ್ದರು ಎಂದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಂಆಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಹಿಂದೂ ಮನೆಗಳನ್ನು ಟಾರ್ಗೆಟ್ ಮಾಡಿ ಲೂಟಿ ಮಾಡಿದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights