FACT CHECK | ವಿರಾಟ್ ಕೊಹ್ಲಿಯ 2017ರ ಜಾಹೀರಾತಿನ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ
ವಿರಾಟ್ ಕೊಹ್ಲಿ ಅವರ ಜಾಹೀರಾತಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೋಳಿ, ಈದ್, ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಆಚರಿಸುತ್ತಿರುವ ಕೊಹ್ಲಿ ಪ್ರತಿಯೊಂದು ಹಬ್ಬವೂ ಭಾರತದ ಹಬ್ಬ ಎಂದು ಹೇಳುವ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
विराट कोहली सचमुच King है…..❤️❤️ pic.twitter.com/BU7apxdlDt
— Kavish Aziz (@azizkavish) March 2, 2025
‘ಕಾವಿಶ್ ಅಜೀಜ್‘ ಎಂಬುವವರು ಈ ವಿಡಿಯೋವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು, ‘ವಿರಾಟ್ ಕೊಹ್ಲಿ ನಿಜಕ್ಕೂ ಕಿಂಗ್’ ಎಂದು ಬರೆದಿದ್ದಾರೆ.
Ye video mujhe AI generated kyun lag raha hai? pic.twitter.com/1KXNwsexBG
— Prernaa (@theprernaa) March 3, 2025
ಇದೇ ವಿಡಿಯೋವನ್ನು ಪ್ರೇರಣಾ ಎಂಬುವವರೂ ಹಂಚಿಕೊಂಡಿದ್ದು, ‘ಈ ವಿಡಿಯೋ ಎಐನಿಂದ ರಚಿಸಿದ್ದು ಎಂದು ನನಗೆ ಏಕೆ ಅನಿಸುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ರಿಜ್ವಾನ್ ಹೈದರ್, ಪ್ರದೀಪ್ ಬೋಚಲಿಯಾ ಮತ್ತು ಮಿಸ್ಟರ್ ಕೂಲ್ ಸೇರಿದಂತೆ ಇತರ ಹಲವರು ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ‘ಗೂಗಲ್ ಲೆನ್ಸ್’ ಮೂಲಕ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್ನಲ್ಲಿ ಇದರ ಮೂಲ ವಿಡಿಯೋ ಲಭ್ಯವಾಗಿದೆ. ಮದುವೆ ಜವಳಿಗಳಿಗೆ ಜನಪ್ರಿಯವಾಗಿರುವ ‘ಮಾನ್ಯವರ್’ ಚಾನೆಲ್ನಲ್ಲಿ ‘Virat Kohli against boundaries’ ಎಂಬ ಶೀರ್ಷಿಕೆಯೊಂದಿಗೆ ಮಾರ್ಚ್ 10, 2017ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇಲ್ಲಿ ಪೂರ್ಣ ಜಾಹೀರಾತನ್ನು ನೋಡಬಹುದಾಗಿದೆ. ಇದನ್ನು ನೋಡಿದಾಗ ಇದರ ಒಂದು ಭಾಗವನ್ನು ಮಾತ್ರ ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ಕಂಡು ಬಂತು.
ಈ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಹೋಳಿ, ಈದ್, ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಆಚರಿಸುತ್ತಿರುವುದನ್ನು ತೋರಿಸಲಾಗಿದೆ. ‘ಭಾರತದಲ್ಲಿ, ಪ್ರತಿ ಹಬ್ಬವೂ ಭಾರತದ ಹಬ್ಬ’ ಎಂಬ ಸಂದೇಶವನ್ನು ಕೊಹ್ಲಿ ಈ ಜಾಹೀರಾತಿನ ಮೂಲಕ ನೀಡಿದ್ದಾರೆ. ಏಳು ವರ್ಷ ಹಳೆಯದ್ದಾದ ಈ ಜಾಹೀರಾತು ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಜಾಹೀರಾತಿನ ವಿಡಿಯೋ ನಿಜವಾಗಿದ್ದರೂ, 2017ರ ಹಳೆಯ ವಿಡಿಯೋ ಆಗಿದೆ.ಇದನ್ನು ಎಡಿಟ್ ಮಾಡಿ ತಮಗೆ ಬೇಕಾದ ಭಾಗವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಲ್ಪಸಂಖ್ಯಾತರ ಮೇಲಿನ ದ್ವೇಷಕ್ಕೆ ಮಸೀದಿ ಧ್ವಂಸ ಮಾಡಲಾಗಿದೆ ಎಂಬುದು ಸುಳ್ಳು

